ಒಂದೇ ಕಾಮಗಾರಿಗೆ ಎರಡು ಉದ್ಘಾಟನೆ, ಕಾಂಗ್ರೆಸ್‌ನ ವಂಚನೆ ರಾಜಕಾರಣಕ್ಕೆ ತೀವ್ರ ಖಂಡನೆ: ಅರುಣ್ ಜಿ. ಶೆಟ್
ಮಂಗಳೂರು: ಶಾಸಕ ವೇದವ್ಯಾಸ್ ಕಾಮತ್ ಅವರು ಈಗಾಗಲೇ ಉದ್ಘಾಟನೆ ಮಾಡಿರುವ ಸಾರ್ವಜನಿಕ ಕಾಮಗಾರಿಯನ್ನು ಕಾಂಗ್ರೆಸ್ ನಾಯಕರು ಮರು ಉದ್ಘಾಟನೆ ಮಾಡುವ ಮೂಲಕ ಜನರ ಮುಂದೆ ಸುಳ್ಳು ಸಾಧನೆ ತೋರಿಸಲು ನಡೆಸುತ್ತಿರುವ ನಾಟಕ ಸಂಪೂರ್ಣ ವಂಚನೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಜಿ. ಶೆಟ್ ತೀವ್ರವಾಗಿ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.
ಒಂದೇ ಕಾಮಗಾರಿಗೆ ಎರಡು ಬಾರಿ ಉದ್ಘಾಟನೆ ಮಾಡುವ ಕಾಂಗ್ರೆಸ್ ನಡೆ, ಅಭಿವೃದ್ಧಿಯ ಕೊರತೆಯನ್ನು ಮರೆಮಾಚುವ ವಿಫಲ ಪ್ರಯತ್ನವಾಗಿದೆ. ಜನರ ತೆರಿಗೆ ಹಣದಲ್ಲಿ ನಿರ್ಮಾಣವಾದ ಯೋಜನೆಗಳನ್ನು ತಮ್ಮದೇ ಸಾಧನೆ ಎಂದು ತೋರಿಸಲು ಕಾಂಗ್ರೆಸ್ ಇಳಿದಿರುವುದು ನಾಚಿಕೆಗೇಡಿತನದ ರಾಜಕಾರಣ ಎಂದು ಅವರು ಕಿಡಿಕಾರಿದ್ದಾರೆ.
ಫ್ಲೆಕ್ಸ್ ಬಗ್ಗೆ ದ್ವಂದ್ವ ನೀತಿ:
ಇದೇ ವೇಳೆ, ಧಾರ್ಮಿಕ ಕಾರ್ಯಕ್ರಮಗಳ ಫ್ಲೆಕ್ಸ್‌ಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕ್ಷಿಪ್ರವಾಗಿ ತೆರವುಗೊಳಿಸುವ ಕಾಂಗ್ರೆಸ್ ಛತ್ರಛಾಯೆಯಲ್ಲಿ ಕೆಲಸಮಾಡುವ ಮಂಗಳೂರು ನಗರ ಕಾರ್ಪೋರೇಷನ್, ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕ್ರಮಗಳ ಫ್ಲೆಕ್ಸ್‌ಗಳ ವಿಷಯದಲ್ಲಿ ಮೌನವಾಗಿರುವುದು ನಿರ್ದಯ ಪಕ್ಷಪಾತ ಮತ್ತು ಅಧಿಕಾರದ ದುರುಪಯೋಗದ ಸ್ಪಷ್ಟ ಉದಾಹರಣೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ನಿಯಮಗಳು ವಿರೋಧಿಗಳಿಗೆ ಮಾತ್ರ ಅನ್ವಯಿಸಿ, ತಮ್ಮವರಿಗೆ ವಿನಾಯಿತಿ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ರೀತಿಯ ಸುಳ್ಳು ಪ್ರಚಾರ ಮತ್ತು ಆಡಳಿತದ ದುರುಪಯೋಗವನ್ನು ಬಿಜೆಪಿ ಸಹಿಸುವುದಿಲ್ಲ. ಜನರನ್ನು ತಪ್ಪು ದಾರಿಗೆಳೆಯುವ ಈ ರಾಜಕೀಯ ನಾಟಕಕ್ಕೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯು ಕಾಂಗ್ರೆಸ್‌ನ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.