ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ಬಂಧನ
ಮಂಗಳೂರು: ಸುಳಿಗೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ಓರ್ವನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಕಸಬಾ ಬೆಂಗ್ರೆ ನಿವಾಸಿ ಚಂದು ಹರೀಶ್ (33) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಡಿಕೇರಿ ಜಿಲ್ಲೆಯ ಸೋಮವಾರ ಪೇಟೆಯ ಮೂವರು ಸ್ನೇಹಿತರು ತಣ್ಣೀರು ಬಾವಿ ಬೀಚ್ ಗೆ ಬಂದಿದ್ದರು. ಆಗ ದಾರಿ ತಪ್ಪಿದ್ದ ಕಾರಣ ರಸ್ತೆ ಬದಿ ಇದ್ದ ವ್ಯಕ್ತಿಯೊಬ್ಬರೊಂದಿಗೆ ವಿಳಾಸ ಕೇಳಲು ವಾಹನ ನಿಲ್ಲಿಸಿದಾಗ ಆರೋಪಿ ಗಳಾದ ಕಸಬಾ ಬೆಂಗ್ರೆ ನಿವಾಸಿಗಳಾದ ಮುಹಮ್ಮದ್ ಸಿನಾನ್ (24) ಝಹೀರ್ ನಿಸಾರ್(22) ಮತ್ತು ಚಂದ್ರು ಹರೀಶ್ ಎಂಬವರು ಸ್ಕ್ರೂ ಡ್ರೈವರ್ ಬಳಸಿ ಚುಚ್ಚುವ ಬೆದರಿಕೆ ಹಾಕಿ ಸುಮಾರು 34,500 ರೂ. ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಮಡಿಕೇರಿ ಸೋಮವಾರಪೇಟೆ ನಿವಾಸಿ ಅಜಯ್ ಕೆ. ಎಂಬವರು ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು.
ತಕ್ಷಣ ತನಿಖೆ ನಡೆಸಿದ ಪಣಂಬೂರು ವೃತ್ತ ನಿರೀಕ್ಷಕ ಸಲೀಮ್ ಅಬ್ಬಾಸ್ ನೇತೃತ್ವದ್ ಪೊಲೀಸ್ ತಂಡ ಮುಹಮ್ಮದ್ ಸಿನಾನ್ ಮತ್ತು ಝಹೀರ್ ನಿಸಾರ್ ನನ್ನು ಬಂಧಿಸಿತ್ತು. ಈ ಪ್ರಕರಣ ಸೇರಿ ಬಂಧನಕ್ಕೆ ಬಾಕಿಯಿದ್ದು ಮೂರು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದ ಚಂದುನನ್ನು ಎ.22ರಂದು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚಿನ ಪ್ರಕರಣ ದಾಖಲಾಗಿದ್ದು, ಈತನ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.