ಅಭಿವೃದ್ಧಿಗೆ ಹಣ ಬಿಡುಗಡೆಯಾದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಶಾಸಕ ಕಾಮತ್

ಅಭಿವೃದ್ಧಿಗೆ ಹಣ ಬಿಡುಗಡೆಯಾದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಶಾಸಕ ಕಾಮತ್


ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅನುದಾನ ತಂದಿದ್ದೇನೆ ಮತ್ತು ಇಂದಿನ ಕಾಂಗ್ರೆಸ್ ಸರ್ಕಾರದ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬುದರ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಶಾಸಕ ವೇದವ್ಯಾಸ ಕಾಮತ್ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-1 165 ಕೋಟಿ ರೂ. ಘೋಷಣೆ ಯಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮಂಗಳೂರು ಸಹಿತ ಎಲ್ಲಾ ಮಹಾನಗರ ಪಾಲಿಕೆಗಳಿಗೆ ಬಿಡುಗಡೆಯಾದ ಅನುದಾನಗಳಿಗೆ ತಡೆ ನೀಡಿತು. ಈಗ ಯೋಜನೆಯ ಹೆಸರಿನ ಮುಂದೆ "2" ಸೇರಿಸಿ ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ ಎಂದು ಅಲ್ಲಲ್ಲಿ ಬ್ಯಾನರ್ ಹಾಕಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಅದೇ ಯೋಜನೆ, ಅದೇ ಅನುದಾನ. ಹೆಸರು ಮಾತ್ರ ಬದಲಾವಣೆ ಅಷ್ಟೇ. ಇದು ಕಾಂಗ್ರೆಸ್ ಸಾಧನೆ ಎಂದು ಕಾಮತ್ ಟೀಕಿಸಿದರು. 

ಹಿಂದಿನ ಯೋಜನೆಗೆ ತಡೆ ನೀಡಿದ್ದು ಯಾಕೆ? ಅವರು ಹಿಂದಿನ ಸರ್ಕಾರದ ಬಜೆಟ್ ಪುಟಗಳ ದಾಖಲೆಗಳನ್ನು ತಿರುವಿ ಹಾಕಿ ನೋಡಲಿ. 165 ಕೋಟಿ ರೂ.ಗಳ ಯೋಜನೆ ಬಜೆಟ್ ನಲ್ಲೇ ಘೋಷಣೆಯಾಗಿದೆ ಎಂದವರು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ಬಿಜೆಪಿ-ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ಕೊಟ್ಟಿದ್ದೇವೆ ಎಂದು ಹೇಳುವ ಇವರು, ಅದರಿಂದ ಕ್ಷೇತ್ರದಲ್ಲಿ ಒಂದಾದರೂ ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆ ಹಾಕಿದ, ಕಾಮಗಾರಿಯ ಟೆಂಡರ್ ಕರೆದ ದಾಖಲೆ ಕೊಡಬಲ್ಲರಾ ? ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೂ ನೀಡಲೇಬೇಕಾದ ಅನುದಾನವನ್ನು ನೀಡಿ ಅದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ನಮ್ಮ ಕ್ಷೇತ್ರಕ್ಕೆ ಯಾವುದಾದರೂ ವಿಶೇಷ ಅನುದಾನ ನೀಡಿದ್ದರೆ ಅದು ನಮ್ಮ ಸರ್ಕಾರದ ಸಾಧನೆ ಎಂದು ಜನತೆ ಮುಂದೆ ಇಡಲಿ.

ವಿಶೇಷ ಯೋಜನೆ ಬರಬೇಕಾದರೆ ಪಕ್ಷಬೇಧ ಮರೆತು ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸೋಣ ಎಂದಿರುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಹಮತವಿದೆ. ಅದಕ್ಕೂ ಮೊದಲು ನಮ್ಮ ಕ್ಷೇತ್ರಕ್ಕೆ, ನಮ್ಮ ಜಿಲ್ಲೆಗೆ, ನಮ್ಮ ಕರಾವಳಿಗೆ ಈ ಬಾರಿಯ ಬಜೆಟ್ ನಲ್ಲಿ ಏನು ನೀಡಬೇಕು ಎಂಬುದರ ಬಗ್ಗೆ ಸ್ಪೀಕರ್, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಕಾಂಗ್ರೆಸ್ ನಾಯಕರು, ಅಧಿಕಾರಿಗಳು ಬೆಂಗಳೂರಿನಲ್ಲಿ, ಮಂಗಳೂರಿನಲ್ಲಿ ಎರಡೆರಡು ಸಭೆ ಮಾಡಿದರೂ ಕೊನೆಗೆ ಏನೂ ಸಿಗಲಿಲ್ಲ ಎಂದು ಅವರು ಟೀಕಿಸಿದರು.

ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಒಂದೇ ದಿನ 70 ಕ್ಕಿಂತ ಹೆಚ್ಚು ಗುದ್ದಲಿ ಪೂಜೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿರುವ ದಾಖಲೆ ಇದೆ. (ದಾಖಲೆಗಳನ್ನು ಲಗತ್ತಿಸಲಾಗಿದೆ) ಆದರೆ ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದೇ ಒಂದು ಗುದ್ದಲಿ ಪೂಜೆ ನಡೆಯುವುದೂ ಸಹ ಕಷ್ಟವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಎಲ್ಲಾ ಅನುದಾನಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರ ತಡೆ ನೀಡಿತ್ತು. 4 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳ ಹೂಳೆತ್ತುತ್ತಿ ದ್ದೇವೆ ಎಂದು ಭಾರೀ ಹುಮ್ಮಸ್ಸಿ ನಿಂದ ಹೇಳಿಕೆ ಕೊಡುವ ಕಾಂಗ್ರೆಸ್ ನಾಯಕರಿಗೆ, ಅದು ಪ್ರತೀ ವರ್ಷವೂ ನಡೆದೇ ನಡೆಯುತ್ತದೆ. 

10 ಕೋಟಿ ರೂ. ಮಳೆ ಹಾನಿಯ ಪರಿಹಾರ ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ಇತ್ತು. ಈಗಲೂ ಇದೆ. ಅದರಲ್ಲೇನೂ ವಿಶೇಷತೆಯಿಲ್ಲ. ಮಳೆ ಹಾನಿಯ ಕುರಿತು ಸ್ಥಳೀಯ ಶಾಸಕರನ್ನು ಒಳಗೊಂಡು ಜಿಲ್ಲಾಧಿಕಾರಿಗಳು ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಅದರಂತೆ ಪರಿಹಾರಗಳು ಬರುತ್ತವೆ. ಅದು ಸ್ಥಳೀಯ ಶಾಸಕರ ಹಕ್ಕು. ಪರಿಹಾರದ ಆದೇಶದಲ್ಲಿಯೂ ಮಂಗಳೂರು ನಗರ ದಕ್ಷಿಣದ ಶಾಸಕರ ಹೆಸರು ಉಲ್ಲೇಖವಿದೆ. ಅದರಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರದ ವಿಶೇಷ ಸಾಧನೆ ಎಂದು ಬಿಂಬಿಸುವುದರಲ್ಲಿ ಏನಿದೆ? ನಾನೇ ಸರಕಾರದಿಂದ ಪರಿಹಾರಗಳು ತಂದಿದ್ದು ಅಂತ ಎಲ್ಲೆಡೆ ಸ್ಥಳ ವೀಕ್ಷಣೆ ನಡೆಸಿ, ಬ್ಯಾನರ್ ಹಾಕಿಕೊಂಡು, ಪತ್ರಿಕಾ ಹೇಳಿಕೆ ನೀಡುವುದು ಯಾವ ರಾಜಕಾರಣ?

ನಗರದಲ್ಲಿ ಅಮೃತ ಯೋಜನೆ, ಜಲಸಿರಿ, ಹಾಗೂ ಒಳಚರಂಡಿ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ವಾಸ್ತವದಲ್ಲಿ ಅದು ಕೇಂದ್ರ ಸರ್ಕಾರದ ಯೋಜನೆಗಳು ಕಾಂಗ್ರೆಸ್ ಸರ್ಕಾರ ಈ ಯೋಜನೆ ಗಳಿಗೆ ಅನುದಾನ ಕೊಟ್ಟ ಬಗ್ಗೆ ಒಂದೇ ಒಂದು ದಾಖಲೆ ನೀಡಲಿ ಎಂದು ವೇದವ್ಯಾಸ ಕಾಮತ್ ಆಗ್ರಹಿಸಿದರು.

ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article