ಸುಬ್ರಹ್ಮಣ್ಯದಲ್ಲಿ 24*7 ತುರ್ತು ಚಿಕಿತ್ಸಾ ಘಟಕಕ್ಕಾಗಿ ಹೋರಾಟಕ್ಕೆ ಸಿದ್ಧತೆ

ಸುಬ್ರಹ್ಮಣ್ಯದಲ್ಲಿ 24*7 ತುರ್ತು ಚಿಕಿತ್ಸಾ ಘಟಕಕ್ಕಾಗಿ ಹೋರಾಟಕ್ಕೆ ಸಿದ್ಧತೆ


ಸುಬ್ರಹ್ಮಣ್ಯ: ಸುಬ್ರಹ್ಮಣ್ಯಕ್ಕೆ 24*7 ತುರ್ತು ಚಿಕಿತ್ಸಾ ಘಟಕ ಮಂಜೂರುಗೊಂಡು ಕಟ್ಟಡ ಸಿದ್ಧವಾಗಿ ಹಲವು ಸಮಯಗಳೇ ಕಳೆದರೂ ಘಟಕ ಇನ್ನೂ ಕಾರ್ಯಾರಂಭಗೊಂಡಿಲ್ಲ. ಹೀಗಾಗಿ ಮೊದಲ ಹಂತದಲ್ಲಿ ತತ್‌ಕ್ಷಣ ಪ್ರಾರಂಭಕ್ಕೆ ಆಗ್ರಹಿಸಿ ಜಿಲ್ಲಾಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸುವುದು, ಇದಕ್ಕೆ ಸ್ಪಂದನೆ ಸಿಗದೇ ಹೋದಲ್ಲಿ ಬೃಹತ್ ಜನಾಗೃಹ ಸಭೆ ನಡೆಸಲು ಸುಬ್ರಹ್ಮಣ್ಯ ಗ್ರಾ.ಪಂ. ಸಭಾಭವನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸುಬ್ರಹ್ಮಣ್ಯ 24*7 ತುರ್ತು ಚಿಕಿತ್ಸಾ ಘಟಕ ಆರಂಭಕ್ಕೆ ಆಗ್ರಹಿಸಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎ.18 ರಂದು ಸಂಜೆ ಜಿಲ್ಲಾಉಸ್ತುವಾರಿ ಸಚಿವರ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಗ್ರಾ.ಪಂ. ಮಾಜಿ ಸದಸ್ಯ ಶಿವರಾಮ ರೈ ಅವರು ಮಾತನಾಡಿ, ಸುಬ್ರಹ್ಮಣ್ಯ 24*7 ತುರ್ತು ಚಿಕಿತ್ಸಾ ಘಟಕದ ಅನಿವಾರ್ಯತೆ ಬಗ್ಗೆ ವಿವರಿಸಿ, ಹಿಂದಿನ ಸಿದ್ಧರಾಮಯ್ಯ ಸರಕಾರದ ಅವದಿಯಲ್ಲಿ ನಿತ್ಯಾನಂದ ಮುಂಡೋಡಿ ಅವರು ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿಘಟಕ ಮಂಜೂರಾಗಿತ್ತು. ಕಾಶಿಕಟ್ಟೆ ಬಳಿ ಸ್ಥಳ ನಿಗದಿಪಡಿಸಲಾಗಿದ್ದರೂ ಅನಂತರ ಅದು ಸುಬ್ರಹ್ಮಣ್ಯ ಆರೋಗ್ಯ ಕೇಂದ್ರದ ಬಳಿಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಕಟ್ಟಡ ನಿರ್ಮಾಣ ಆಗಿ, ಅಗತ್ಯ ಪರಿಕರಗಳು ಬಂದಿದ್ದರೂ ಘಟಕ ಮಾತ್ರ ಕಾರ್ಯಾರಂಭ ಆಗಿಲ್ಲ.ಜನದಟ್ಟಣೆಯ ಸುಬ್ರಹ್ಮಣ್ಯಕ್ಕೆ ಇದರ ಆವಶಕ್ಯತೆ ಇದ್ದರೂ ಕಾರ್ಯಾರಂಭಕ್ಕೆ ವಿಳಂಬ ಮಾಡಲಾಗಿದೆ. ಇದರ ವಿರುದ್ಧ ನಾವೆಲ್ಲರೂ ಪಕ್ಷಾತೀತವಾಗಿ, ಒಂದಾಗಿ ಹೋರಾಟ ಮಾಡಬೇಕು. ಜನಬೆಂಬಲ ಇದ್ದರೆ ನಮ್ಮ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ ಎಂದರು.

ಶಿವಕುಮಾರ್ ಹೊಸೊಳಿಕೆ ಮಾತನಾಡಿ, ಅನುಷ್ಠಾನಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇಚ್ಛಾಶಕ್ತಿ ಬೇಕು. ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಇಲ್ಲಿಇಬ್ಬರು ವೈದ್ಯರು, ಇತರೆ ಆರೋಗ್ಯ ಸಿಬಂದಿಗಳ ಅಗತ್ಯತೆ ಇದೆ. ಘಟಕ ಕಾರ್ಯಾರಂಭದ ಜತೆಗೆ ಆರೋಗ್ಯ ಕೇಂದ್ರಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಲು ನಿಯೋಗದ ಮೂಲಕ ನಾವು ಆಗ್ರಹ ಮಾಡೋಣ ಎಂದರು.

ಸಾಮಾಜಿಕ ಮುಂದಾಳು ರವಿ ಕಕ್ಕೆಪದವು ಮಾತನಾಡಿ, ಕಳೆದ ಹತ್ತು ವರ್ಷದಿಂದ ತುರ್ತು ಚಿಕಿತ್ಸಾ ಘಟಕದ ಅನುಷ್ಠಾನಕ್ಕೆ ಹೋರಾಟ ಮಾಡುತ್ತಿದ್ದೇನೆ. ಕ್ಷೇತ್ರಕ್ಕೆ ಬರುತ್ತಿರುವ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಇದ್ದೇನೆ. ಹಿಂದೊಮ್ಮೆ ಮೃತದೇಹ ಇರಿಸಿ ಪ್ರತಿಭಟನೆ ಮಾಡಿದ್ದೇವು. ಈ ಬಾರಿಯ ನಮ್ಮ ಹೋರಾಟ ತಾರ್ಕಿಕ ಅಂತ್ಯದ ತನಕ ಸಾಗಬೇಕು ಎಂದರು.

ಸಭೆಯಲ್ಲಿದ್ದ ಕುಲ್ಕುಂದ ನಿವಾಸಿ ಹೇಮಮಾಲಿನಿ ಅವರು ತುರ್ತು ಚಿಕಿತ್ಸೆ ಸಿಗದೆ ತನ್ನ ಪತಿ ಮೃತಪಟ್ಟ ಘಟನೆಯನ್ನು ವಿವರಿಸಿ ತುರ್ತು ಚಿಕಿತ್ಸಾ ಘಟಕದ ಅಗತ್ಯತೆಯ ಬಗ್ಗೆ ಸಭೆಯ ಮುಂದಿಟ್ಟರು. ಲಕ್ಷಾಂತರ ಭಕ್ತರು ಬರುವ ಕ್ಷೇತ್ರದ ವ್ಯಾಪ್ತಿಯ ಆಸ್ಪತ್ರೆಯಲ್ಲಿ 24 ತಾಸು ಚಿಕಿತ್ಸೆ ನೀಡುವ ಘಟಕದ ಅಗತ್ಯತೆಯ ಬಗ್ಗೆಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ಐನೆಕಿದು ಪ್ರಾ.ಕೃ.ಸ ಸಹಕಾರ ಸಂಘದ ಅಧ್ಯಕ್ಷ ಎಚ್.ಎಲ್ ವೆಂಕಟೇಶ್, ಗ್ರಾ.ಪಂ.ಮಾಜಿ ಉಪಾಧಕ್ಷ ರಾಜೇಶ್ ಎನ್.ಎಸ್., ಗೋಪಾಲ ಎಣ್ಣೆಮಜಲು, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಚಂದ್ರಶೇಖರ ನಾಯರ್, ಮಾಧವ ಡಿ., ಪವನ್ ಡಿ.ಎಂ., ಕುಕ್ಕೆಶ್ರೀ ಅಟೋ ರಿಕ್ಷಾ ಚಾಲಕ ಸಂಘದ ಗೌರವಾಧಕ್ಷ ಉಮೇಶ್ ಕೆ.ಎನ್., ಅಧ್ಯಕ್ಷ ಭುವನೇಂದ್ರ, ಶೇಷ ಕುಮಾರ್, ಗ್ರಾ.ಪಂ.ಮಾಜಿ ಸದಸ್ಯ ಗಿರೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article