ಪ್ರಭಾಕರ ಪ್ರಭು ಮೇಲಿನ ಕೇಸಿಗೆ ಹೈಕೋರ್ಟ್ ತಡೆ
ಬಂಟ್ವಾಳ: ಕರ್ನಾಟಕ ಸರಕಾರವು ಕಳೆದ ಸೆಪ್ಟಂಬರ್‌ನಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಗ್ಗೆ ಬಂಟ್ವಾಳ ತಾಲೂಕು ಪಂಚಾಯತ್ ಹೆಸರನ್ನು ತನ್ನ ಲೆಟರ್ ಹೆಡ್‌ಗೆ ಬಳಸಿ ದುರುಪಯೋಗ ಪಡಿಸಿದರೆನ್ನಲಾದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ತಾ.ಪಂ. ಮಾಜಿ ಸದಸ್ಯ, ಬಿಜೆಪಿ ಮುಖಂಡ ಪ್ರಭಾಕರ ಪ್ರಭು ವಿರುದ್ಧ ದಾಖಲಾದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಕರ್ನಾಟಕ ರಾಜ್ಯ ಸರಕಾರದ ವತಿಯಿಂದ 2025 ಸೆಪ್ಟೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿದ್ದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಬಗ್ಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ದ.ಕ. ಜಿ.ಪಂ. ಸಿ.ಇ.ಓ ಅವರು ಹೈಕೋರ್ಟ್ ಆದೇಶ ಮೀರಿ ಜ್ಯಾಪನ ಪತ್ರ ಹೋರಡಿಸಿದ್ದರು.
ಇದನ್ನು ಅಕ್ಷೇಪಿಸಿ ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ದ.ಕ.ಜಿ.ಪಂ. ಸಿಇಒ ಯವರಿಗೆ ಪತ್ರ ಬರೆದು ಅಕ್ಷೇಪ ಪತ್ರದೊಂದಿಗೆ ಮನವಿ ಸಲ್ಲಿಸಿದ್ದರು.
ಈ ಸಮೀಕ್ಷೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಬಹುದು ಹಾಗೂ ಸಮೀಕ್ಷೆಯಲ್ಲಿ ನಾಗರೀಕರಿಗೆ ಆಸಕ್ತಿ ಇಲ್ಲವಾದಲ್ಲಿ ಒತ್ತಡ ಹೇರುವಂತಿಲ್ಲ ಎಂದೂ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆದೇಶಪ್ರತಿಯೊಂದಿಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಒತ್ತಡ ಹಾಕದಂತೆ ಮನವಿ ಮಾಡಿ ಪತ್ರ ಬರೆದಿದ್ದರು.
ಈ ಸಂದರ್ಭ ಪ್ರಭುರವರು ತಾ.ಪಂ. ಸದಸ್ಯನಾಗಿದ್ದ ಕಾಲದ ಲೆಟರ್ ಹೆಡ್‌ಗೆ ಮಾಜಿಸದಸ್ಯ ಎಂದು ಬರೆದು ದುರುಪಯೋಗಪಡಿಸಿದ್ದರು ಎಂದು ಆರೋಪಿಸಲಾಗಿತ್ತು. ಆಗಿನ ಜಿಪಂ ಸಿಇಒ ಅವರ ಸೂಚನೆಯಂತೆ ಬಂಟ್ವಾಳ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಯವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಭಾಕರ ಪ್ರಭು ವಿರುದ್ಧ ಕೇಸು ದಾಖಲಾಗಿತ್ತು. ಬಳಿಕಪ್ರಭು ಅವರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿ ವಿಚಾರಣೆ ಕೂಡ ನಡೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭು ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಭಾಕರ ಪ್ರಭು ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ಪ್ರಕರಣವನ್ನು ಮುಂದೂಡಿದ್ದಾರೆ.
ಪ್ರಭು ಪರವಾಗಿ ಹೈಕೋರ್ಟ್ ನ್ಯಾಯವಾದಿ ರೋಹಿತ್ ಬಿ.ಜೆ. ವಾದಿಸಿದ್ದರು.