ಕಳೆದ ಒಂದು ದಶಕದಲ್ಲಿ ಭಾರತವು ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ: ನಿರ್ಮಲಾ ಸೀತಾರಾಮನ್

ಕಳೆದ ಒಂದು ದಶಕದಲ್ಲಿ ಭಾರತವು ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ: ನಿರ್ಮಲಾ ಸೀತಾರಾಮನ್


ಮಂಗಳೂರು: ಕಳೆದ ಒಂದು ದಶಕದಲ್ಲಿ ಭಾರತವು ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಸಭಾಂಗಣದಲ್ಲಿ ಮಂಗಳವಾರ ನಡೆದ ನಿಟ್ಟೆ ಡಾ.ಎನ್.ವಿನಯ ಹೆಗ್ಡೆ ಉಪನ್ಯಾಸ  ಕಾರ್ಯಕ್ರಮದಲ್ಲಿ ‘ವಿಕಸಿತ ಭಾರತ-2047ರ ದೃಷ್ಟಿಕೋನ’ ಎಂಬ ವಿಷಯದ ಕುರಿತಾಗಿ ಅವರು ಉಪನ್ಯಾಸ ನೀಡಿದರು.

ವಿಕಸಿತ ಭಾರತ ಎಂಬುದು ಬಹು ದೂರದ ಗುರಿಯಲ್ಲ, ಇನ್ನು ಎರಡು ದಶಕಗಳಲ್ಲೇ ಸಾಧಿಸಬೇಕಾದ ಮಹತ್ವದ ಹಂತವಾಗಿದೆ. 2047ರೊಳಗೆ ಭಾರತವನ್ನು ಸಮೃದ್ಧ ಮತ್ತು ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದುದು. ಕರಾವಳಿ ಕರ್ನಾಟಕದಲ್ಲಿ ಶಿಕ್ಷಣ ಅವಕಾಶಗಳನ್ನು ವಿಸ್ತರಿಸಿ, ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಶ್ರೇಷ್ಠತೆಯ ಪ್ರತೀಕವಾಗಿ ಗುರುತಿಸಿಕೊಂಡ ನಿಟ್ಟೆ ವಿನಯ ಹೆಗ್ಡೆಯವರ ಶೈಕ್ಷಣಿಕ ಮತ್ತು ಸಮಾಜ ಸೇವೆಯನ್ನು ಜನತೆ ಮರೆಯಲು ಸಾಧ್ಯವಿಲ್ಲ. ಅವರು ಶೈಕ್ಷಣಿಕ ರಂಗಕ್ಕೆ ಹೊಸ ದಿಕ್ಕು ತೋರಿಸಿದ್ದಾರೆ. ಇಂತಹ ಅನೇಕ ಶಿಕ್ಷಣ ತಜ್ಞರು ಕರಾವಳಿಗೆ  ಮಾತ್ರವಲ್ಲದೆ ರಾಜ್ಯ ಮತ್ತು ದೇಶದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು.

2014ರ ಹಣಕಾಸು ವರ್ಷದಲ್ಲಿ 1.9 ಲಕ್ಷ ಕೋ.ರೂ.ಮಟ್ಟದಲ್ಲಿದ್ದ ಆರ್ಥಿಕ ವಲಯವು 226ರ ವೇಳೆಗೆ 21.2 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಸಾಮರ್ಥ್ಯದಲ್ಲಿ ಮಹತ್ತರ ಬದಲಾವಣೆಯನ್ನು ಸೂಚಿಸುತ್ತದೆ. ಅದೇ ರೀತಿ ಚಂದ್ರಯಾನ-3 ಯಂತಹ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಗಳು ವಿಶ್ವದ ಗಮನ ಸೆಳೆದಿವೆ ಎಂದು ಅವರು ಹೇಳಿದರು.

ಭಾರತವು ಪ್ರಾಚೀನ ಕಾಲದಿಂದಲೂ ಶ್ರೀಮಂತ ಸಂಸ್ಕೃತಿ ಮತ್ತು ಆರ್ಥಿಕ ಶಕ್ತಿಯನ್ನು ಹೊಂದಿದ ದೇಶ. ವಿಶ್ವದೊಂದಿಗೆ ವ್ಯಾಪಾರ, ಸಾಂಸ್ಕೃತಿಕ ವಿನಿಮಯಗಳ ಮೂಲಕ ಭಾರತ ಪ್ರಮುಖ ಸ್ಥಾನವನ್ನು ಪಡೆದಿತ್ತು. ಪ್ರಸಕ್ತ ಭಾರತವು ತನ್ನ ಮೂಲ ಶಕ್ತಿಯನ್ನು ಮರುಪಡೆಯುವ ಮೂಲಕ ವಿಶ್ವದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಅವರು ಹೇಳಿದರು.

ತಂತ್ರಜ್ಞಾನಗಳು ಅಭಿವೃದ್ಧಿಯಾಗಿರುವ ಪ್ರಸಕ್ತ ಕಾಲಘಟ್ಟದಲ್ಲಿ ಯುವಜನತೆ ಹೆಚ್ಚಿದ ಅವಕಾಶಗಳು, ನವೀನತೆ ಮತ್ತು ಜಾಗತಿಕ ಮಟ್ಟದ ಸ್ಪರ್ಧಾತ್ಮಕತೆಯನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ, ಇಂದಿನ ಸಾಧನೆಗಳನ್ನು ದೀರ್ಘಕಾಲಿಕ ಮತ್ತು ಸಮಗ್ರ ಪರಿವರ್ತನೆಗೆ ರೂಪಾಂತರಿಸುವುದು ಮುಂದಿನ ಸವಾಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶದ ಅಭಿವೃದ್ಧಿ ಜನರೊಂದಿಗೆ ಬೆಸೆದುಕೊಂಡು ಸಾಗುತ್ತಿದೆ. ಉತ್ಪಾದನೆ, ಯುವಶಕ್ತಿ ಹಾಗೂ ಮಹಿಳಾ ಸಬಲೀಕರಣ ಭಾರತದ ಅಭಿವೃದ್ಧಿಗೆ ಹೊಸ ದಿಕ್ಕು ತೋರಲಿದೆ. ಈ ನೆಲೆಯಲ್ಲಿ ಸ್ವಾವಲಂಬನೆಗೆ ವಿಶೇಷ ಒತ್ತು ನೀಡಲಾಗಿದೆ. ಆಮದುಗಳ ಮೇಲಿನ ಅವಲಂಬನೆಯಿಂದ ದೇಶದ ಅಭಿವೃದ್ಧಿ ನಿರೀಕ್ಷಿಸಲಾಗದು. ಬದಲಾಗಿ, ಉತ್ಪನ್ನಗಳನ್ನು ದೇಶದಲ್ಲೇ ನಿರ್ಮಿಸುವುದರ ಮೂಲಕ ಭಾರತವನ್ನು ಬಲಿಷ್ಠ ಕೈಗಾರಿಕಾ ಕೇಂದ್ರವನ್ನಾಗಿ ರೂಪಿಸಬೇಕಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ. ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತಿತರರು ಉಪಸ್ಥಿತರಿದ್ದರು.

ನಿಟ್ಟೆ ವಿವಿಯ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಪತಿ ವಿಶಾಲ್ ಹೆಗ್ಡೆ ಸ್ವಾಗತಿಸಿದರು. ಉಪ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article