ಗೋ ಹತ್ಯೆ ನಿಷೇಧ ಕಾನೂನು ಕಟ್ಟು ನಿಟ್ಟಾಗಿ ಅನುಷ್ಠಾನ ಮಾಡಬೇಕು: ಮಿಲಿಂದ್ ಪರಾಂಡೆ
ಮಂಗಳೂರು: ಗೋ ಹತ್ಯೆ ನಿಷೇಧ ಕಾನೂನು ಕಟ್ಟು ನಿಟ್ಟಾಗಿ ಅನುಷ್ಠಾನ ಮಾಡಬೇಕು ಎಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎರಡನ್ನೂ ನಾವು ಒತ್ತಾಯಿಸುತ್ತಿದ್ದೇವೆ ಎಂದು ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದರು.
ಅವರು ಮಂಗಳೂರಿನ ಸಂಘನಿಕೇತನದಲ್ಲಿ ಬಜರಂಗದಳ ದಕ್ಷಿಣ ಪ್ರಾಂತದ ಸಂಯೋಜಕರ ಸಮಾವೇಶದ ಬಳಿಕ ಸಂಘನಿಕೇತನದ ಸುಜ್ಞಾನದಲ್ಲಿ ಆದಿತ್ಯವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ 2020ರಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಅನುಷ್ಠಾನ ಆಗಬೇಕು. ದೇಶದಲ್ಲೂ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಬೇಕು ಎಂದೂ ನಾವು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.
ಕೇರಳ, ತಮಿಳುನಾಡು ರಾಜ್ಯ ಕ ರ್ನಾಟಕದ ನೆರೆಯ ರಾಜ್ಯಗಳಾಗಿದ್ದು, ಕೇರಳದಲ್ಲಿ ಗೋ ಹತ್ಯಾ ನಿಷೇಧ ಕಾನೂನು ಇಲ್ಲದಿರುವುದರಿಂದ, ದೊಡ್ಡ ಪ್ರಮಾಣದಲ್ಲಿ ಗೋಕಳ್ಳತನ ನಡೆಯುತ್ತಿದೆ. ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಜರಂಗದಳ ಪ್ರಾಂತ ಸಂಯೋಜಕ್ ಸಮಾವೇಶದಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಬಜರಂಗದಳಕ್ಕೆ ಹೊಸ ಕಾರ್ಯಕರ್ತರ ಜೋಡಿಸುವ ಮೂಲಕ ಸಂಘಟ ನಾ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಚರ್ಚಿಸಲಾಗಿದೆ. ಕಳೆದ ವರ್ಷ ಸಂಘಟನೆ 72 ಲಕ್ಷ ಸದಸ್ಯರನ್ನು ಹೊಂದಿದ್ದು, ಈ ವರ್ಷದ ನವೆಂಬರ್‌ನಲ್ಲಿ ಸದಸ್ಯತ್ವ ಅಭಿಯಾನ ನಡೆಸಿ ಒಂದು ಕೋಟಿಗೆ ಸದಸ್ಯರ ಹೊಂದುವ ಗುರಿ ಹೊಂದಿದ್ದೇವೆ. ಆ ಮೂಲಕ ನಮ್ಮ ಹೋರಾಟಗಳನ್ನು ತೀವ್ರವಾಗಿ ನಡೆಸಲಿದ್ದೇವೆ ಎಂದರು.
ಸಮಾವೇಶದಲ್ಲಿ ನಶ ಮುಕ್ತ ಭಾರತ ನಿರ್ಮಾಣದ ಸಂಕಲ್ಪ ಮಾಡಲಾಗಿದೆ. ದೇಶದಲ್ಲಿ ವ್ಯಾಪಕ ರೀತಿಯಲ್ಲಿ ಯುವ ಜನತೆ ಡ್ರಗ್ಸ್ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ದೇಶದ ಕಠಿಣವಾದ ಗಡಿ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ಅಕ್ರಮವಾಗಿ ಸಾಗಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ವಿವಿಧ ಸಂಘಟನೆಗಳು ಡ್ರಗ್ಸ್ ವಿರುದ್ಧ ಕೆಲಸ ಮಾಡುತ್ತಿದ್ದು, ಬಜರಂಗದಳ ಹಾಗೂ ದುರ್ಗಾ ವಾಹಿನಿ ಮೂಲಕ ಡ್ರಗ್ಸ್ ವಿರುದ್ಧ ಜಾಗೃತಿಗಾಗಿ 6 ಸಾವಿರಕ್ಕೂ ಅಧಿಕ ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು.
ಲವ್‌ಜಿಹಾದ್ ಪ್ರಕರಣಗಳು ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದು, ಕೇವಲ ಮುಸ್ಲಿಂ ಯುವಕರು ಮಾತ್ರವಲ್ಲದೇ ಮಹಿಳೆಯರು ಕೂಡ ಇದರಲ್ಲಿ ಭಾಗಿಯಾಗುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಇತ್ತೀಚೆಗೆ ಬೆಳಕಿಗೆ ಬಂದ ಪ್ರಮುಖ ಎರಡು ಪ್ರಕರಣಗಳೇ ಸಾಕ್ಷಿ. ಐಟಿ ಕ್ಷೇತ್ರ ಇಂದು ಬೃಹತ್ ಆಗಿ ಬೆಳೆದಿದ್ದು, ಆ ಕ್ಷೇತ್ರದಲ್ಲೂ ಲವ್‌ಜಿಹಾದ್ ನಂತಹ ಪ್ರಕರಣಗಳು ನಡೆಯುತ್ತಿರುವುದು ಹಿಂದು ಸಮಾಜಕ್ಕೆ ದೊಡ್ಡ ಆಪತ್ತು. ದೂರುಗಳನ್ನೂ ನೀಡಿದರೂ ಕ್ರಮವಹಿಸಿದ ಕಂಪೆನಿಗಳ ಪ್ರಮುಖರನ್ನು ವಿಹಿಂಪ ಮುಂದಿನ ದಿನಗಳಲ್ಲಿ ಭೇಟಿಯಾಗಿ ಚರ್ಚಿಸಲಿದೆ. ಮುಸ್ಲಿಂ ಸಮಾಜ ಈ ಬಗ್ಗೆ ಚಿಂತನೆ ನಡೆಸಬೇಕು. ಕೆಲವೇ ಕೆಲವರಿಂದ ಇಂತಹ ಘಟನೆಗಳು ನಡೆಯುತ್ತಿದೆ ಎನ್ನುವವರಿಗೆ ಮುಂದೆ ಇದು ಇಡೀ ಸಮುದಾಯಕ್ಕೆ ಕಪ್ಪು ಚುಕ್ಕೆಯಾಗಲಿದೆ ಎಂದ ಅವರು, ಇದರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕೇಂದ್ರೀಯ ಕೋಶಾಧ್ಯಕ್ಷ ಹಾಗೂ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ದೀಪಕ್ ರಾಜ್ ಗೋಪಾಲ್, ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಹ ಕಾರ್ಯದರ್ಶಿ ಶರಣ್ ಪಂ ಪ್‌ವೆಲ್, ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಇದ್ದರು.