ಏಕಾಏಕಿ ತೆರೆದ ಬಾಗಿಲು: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿಯರು
ಬೆಳಗ್ಗೆ ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಅಕ್ಕ ತಂಗಿ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ರೇಷ್ಮೆ ಕ್ರಾಸ್ ರೋಡ್ ಎಂಬಲ್ಲಿ ಪೆಟ್ರೊಲ್ ಪಂಪ್ ಎದುರು ಒಮ್ಮೆಲೆ ಬಸ್ಸಿನ ಬಾಗಿಲು ತೆರೆದು ಈ ಘಟನೆ ನಡೆದಿದೆ.
ಬಸ್ನ ಬಾಗಿಲು ಏಕಾಏಕಿ ತೆರೆದಿದ್ದರಿಂದ ಅಕ್ಕ ಕೆಳಗೆ ಬೀಳುತ್ತಿದ್ದಾಗ, ಆಕೆಯನ್ನು ರಕ್ಷಿಸಲು ತಂಗಿ ಮುಂದಾಗಿ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಇಬ್ಬರೂ ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳೀಯರ ಸಹಕಾರದಿಂದ ಚಿಕಿತ್ಸೆಗಾಗಿ ಬೆಳ್ತಂಗಡಿ ಹಾಗೂ ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಓರ್ವ ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದರೆ, ಮತ್ತೋರ್ವ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತಿದ್ದಾರೆ. ಇವರು ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಾಗರಾಜ ಹಾಗೂ ರೂಪ ದಂಪತಿಗಳ ಮಕ್ಕಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕಿತ್ಸೆ ಬಳಿಕ ಸಹಾಯಕಿಯ ನೆರವಿನೊಂದಿಗೆ ಗಾಯಾಳು ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.