ಸ್ಕೂಟರ್ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ: ಪ್ರಕರಣ ದಾಖಲು
ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ ಖಾರದ ಪುಡಿ ಎರಚಿ ಸ್ಕೂಟರ್ ಢಿಕ್ಕಿಯಲ್ಲಿದ್ದ 46 ಸಾವಿರ ರೂ. ದೋಚಿರುವ ಘಟನೆ ವರದಿಯಾಗಿದೆ.
ಗಂಜಿಮಠದ ಝಾರಾ ಹಾಲ್‌ನಲ್ಲಿ ಅಡುಗೆ ಮೇಲ್ವಿಚಾರಕರಾಗಿದ್ದ ಮಹಮ್ಮದ್ ಮನ್ಸೂರ್ ಹಣ ಕಳೆದು ಕೊಂಡವರು.
ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದಂತೆ, ಎ.26ರಂದು ರಾತ್ರಿ 9.10ರ ವೇಳೆಗೆ ಬಂಗ್ಲಗುಡ್ಡೆಗೆ ತಲುಪಿದ್ದಾರೆ. ಆಗ ರಸ್ತೆಯ ಬದಿಯಲ್ಲಿ ನಿಂತಿದ್ದ ಇಬ್ಬರು ಯುವಕರು ಮನ್ಸೂರ್ ಅವರ ಸ್ಕೂಟರ್‌ನ್ನು ನಿಲ್ಲಿಸಿ, ತಮ್ಮ ಸ್ಕೂಟರ್ ಕೆಟ್ಟಿದೆ ಎಂದು ಹೇಳಿದ್ದಾರೆ.
ಮನ್ಸೂರ್ ಯುವಕರ ಸ್ಕೂಟರ್ ನ ಹತ್ತಿರ ಹೋಗಿ ಪೆಟ್ರೋಲ್ ಪೈಪನ್ನು ಪರಿಶೀಲಿಸುತ್ತಿರುವಾಗ, ಯುವಕರು ತಮ್ಮ ಬಳಿ ಇದ್ದ ಖಾರದ ಪುಡಿಯನ್ನು ಮನ್ಸೂರ್ ಕಣ್ಣಿಗೆ ಎರಚಿದ್ದಾರೆ.
ಮನ್ಸೂರ್ ಬಳಿಕ ರಸ್ತೆಯಲ್ಲಿ ಬರುತ್ತಿದ್ದ ವಾಹನವೊಂದನ್ನು ನಿಲ್ಲಿಸಿ ಅವರರಿಂದ ನೀರು ಪಡೆದು, ಮುಖ ತೊಳೆದು ಸ್ಕೂಟರ್‌ನ ಢಿಕ್ಕಿ ತೆರೆದು ನೋಡಿದಾಗ 46,000 ರೂ. ನಗದನ್ನು ದುಷ್ಕರ್ಮಿಗಳು ಎಗರಸಿಕೊಂಡು ಪರಾರಿಯಾಗಿರುವುದು ಗೊತ್ತಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.