ವಿಶ್ವ ದಾಖಲೆ ಖಂಡಿತಾ ಆಗಲಿದೆ: ದಿನೇಶ್ ಗುಂಡೂರಾವ್
ಮಂಗಳೂರು: ಕೊಂಕಣಿಗರ ಜನಸಂಖ್ಯೆ ಕಡಿಮೆಯಿದ್ದರೂ, ಅವರ ಉತ್ಸಾಹ ಮತ್ತು ಸೃಜನಶೀಲತೆ ಶ್ಲಾಘನೀಯ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮತ್ತು ಸಮಾಜ ಸೇವೆಯಲ್ಲಿ ಕೊಂಕಣಿ ಸಮುದಾಯ ಮುಂಚೂಣಿಯಲ್ಲಿದೆ. ಸಂಗೀತ ಅವರಿಗೆ ರಕ್ತಗತವಾಗಿದೆ. ಹಲವು ದಾಖಲೆಗಳನ್ನು ಬರೆದ ಮಾಂಡ್ ಸೊಭಾಣ್ ಸಂಸ್ಥೆ ಈಗ ಆರು ಸಾವಿರ ಗಾಯಕರು ಮತ್ತು ಐದು ಸಾವಿರ ಹಾಡುಗಳಿಂದ ಹೊಸ ವಿಶ್ವ ದಾಖಲೆಯನ್ನು ರಚಿಸಲು ಸಜ್ಜಾಗಿದೆ. ಖಂಡಿತಾ ಈ ದಾಖಲೆ ಆಗಲಿದೆ ಎಂಬ ವಿಶ್ವಾಸವಿದೆ. ಸಾಧ್ಯವಾದಲ್ಲಿ ನಾನೂ ಕಾರ್ಯಕ್ರಮಕ್ಕೆ ಬರುವೆ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಕೊಂಕಣಿಯ ಪ್ರಮುಖ ಸಾಂಸೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ ಅಸ್ತಿತ್ವದ ಮಾಣಿಕ್ಯ ಮಹೋತ್ಸವ ಆಚರಣಾ ಸಂದರ್ಭದಲ್ಲಿ, ಇದೇ ನವೆಂಬರ್ 3 ರಿಂದ 15 ರವರೆಗೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಮುಹೂರ್ತವನ್ನು ವೀಣೆಯ ಪ್ರತಿಕೃತಿ ಮೇಲಿರುವ 12 ವಿಭಿನ್ನ ರಂಗಿನ ದೀಪಗಳನ್ನು ಬೆಳಗಿಸಿ ಮತ್ತು ಹೂವಿನ ಮೊಗ್ಗಿನಿಂದ ಸಮಾವೇಶದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಗೌರವ ಅತಿಥಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ ಇವರಿಗೆ ಸಂಗೀತ ಬೇಟನ್ ಹಸ್ತಾಂತರಿಸಿ ಮಾತನಾಡಿದರು.
ಮಹಾನ್ ಸಾಧನೆಗಳನ್ನು ಮಾಡಿದ ಮಾಂಡ್ ಸೊಭಾಣ್ ಸಂಸ್ಥೆಗೆ ಇದುವರೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಿಲ್ಲ. ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಕೊಂಕಣಿಯ ಕೀರ್ತಿ ಬಾವುಟವನ್ನು ಸದಾಕಾಲ ಹಾರಿಸುವ ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಸರಕಾರ ಅನುದಾನ ನೀಡಬೇಕು. ಈ ದಾಖಲೆಯೂ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಗೌರವ ಅತಿಥಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಗೋವಾದ ಕಲಾವಿದ ಮೈಕಲ್ ಗ್ರೇಶಿಯಸ್ ಶುಭ ಹಾರೈಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಅಧ್ಯಕ್ಷ ಲುವಿ ಪಿಂಟೊ, ಕೊಂಕಣಿ ಸಂಗೀತಕ್ಕೆ ಮಹೋನ್ನತ ಹಿರಿಮೆ ತಂದು ಕೊಟ್ಟ ಎರಿಕ್ ಒಝೇರಿಯೊರವರ ಕೆಲಸಗಳನ್ನು ಮುಂದುವರಿಸುವುದೇ ನಾವು ಅವರಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ. ಇದು ಕೇವಲ ಗಿನ್ನೆಸ್ ದಾಖಲೆಯ ಪ್ರಯತ್ನವಾಗದೆ, ಕೊಂಕಣಿ ಒಗ್ಗಟ್ಟನ್ನು ಆಚರಿಸುವ, ಕೊಂಕಣಿ ಬಾವುಟವನ್ನು ಜಗದೆತ್ತರಕ್ಕೆ ಏರಿಸುವ ಹಾಗೂ ಈ ಮೂಲಕ ಕೊಂಕಣಿ ಸಂಗೀತದ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಅವಕಾಶವಾಗಲಿದೆ. ಇದುವರೆಗೆ ನಮ್ಮ ಕಾರ್ಯಕ್ರಮದ ಶಿಸ್ತು, ಅಚ್ಚುಕಟ್ಟುತನ ನೋಡಿ ಜನರೇ ಸಹಕರಿಸಿದ್ದಾರೆ. ಈ ಕಾರ್ಯಕ್ರಮ ಕೂಡಾ ಎಲ್ಲರ ಸಹಕಾರದಿಂದ ಯಶಸ್ವಿಯಾಗಲಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಾಯಕಿ ಜೊಯ್ಸ್ ಒಝೇರಿಯೊರನ್ನು ಗೌರವಿಸಲಾಯಿತು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಮತ್ತು ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು.