ಕೊಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಮಾರಿಪೂಜಾ ಉತ್ಸವ
Thursday, April 16, 2026
ಮೂಡುಬಿದಿರೆ: ಇಲ್ಲಿನ ಕೊಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಮಾರಿಪೂಜಾ ಉತ್ಸವವು ಮಂಗಳವಾರ ಮತ್ತು ಬುಧವಾರ ನಡೆಯಿತು.
ಮಂಗಳವಾರ ಜ್ಯೋತಿನಗರದಲ್ಲಿರುವ ಉಚ್ಚಂಗಿ ಕಟ್ಟೆಯಲ್ಲಿ ಬೊಂಬೆಯನ್ನು ಪ್ರತಿಷ್ಠಾಪಿಸಿ ಪೂಜೆ ನಡೆಯಿತು. ರಾತ್ರಿ ಸಕಲ ಬಿರುದಾವಳಿಗಳೊಂದಿಗೆ ಮೆರವಣಿಗೆಯ ಮೂಲಕ ಬೊಂಬೆಯನ್ನು ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ವಿಶೇಷ ಪೂಜೆ, ದರ್ಶನ ಹಾಗೂ ಪಂಜುರ್ಲಿ ಕಲ್ಲುಡ-ಕಲ್ಲುರ್ಟಿ ದೈವಗಳ ಕೋಲ ನಡೆಯಿತು. ಬುಧವಾರ ಸಂಜೆ ಬೊಂಬೆಯನ್ನು ಸ್ಥಳೀಯ ಕಾಡಿನಲ್ಲಿ ವಿಸರ್ಜಿಸಲಾಯಿತು.
ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಉಳಿಕೆ ಹಣದಿಂದ ನಿರ್ಮಿಸಿದ ವೇದಿಕೆಯನ್ನು ಕ್ಷೇತ್ರದ ಅಸ್ರಣ್ಣರಾದ ಅನಂತಪದ್ಮನಾಭ ಅಸ್ರಣ್ಣ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ ಆಡಳಿತ ಮಂಡಳಿ ಅಧ್ಯಕ್ಷ ದೇಜು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಉತ್ಸವದ ಅಂಗವಾಗಿ ಬೆನಕ ಆರ್ಟ್ಸ್ ತಂಡದಿಂದ ಪೊಲಿಪುದಪ್ಪೆ ಜಲದುರ್ಗಾ ನಾಟಕ ನಡೆಯಿತು.