ಮಾವಿನ ಮರದಿಂದ ಬಿದ್ದು ವೃದ್ಧ ಸಾವು
Sunday, April 12, 2026
ಮೂಡುಬಿದಿರೆ: ಮಾವಿನ ಕಾಯಿಗಳನ್ನು ಕೀಳಲು ಮರಕ್ಕೆ ಹೋಗಿದ್ದ ವೃದ್ಧರೋವ೯ರು ಆಯ ತಪ್ಪಿ ನೆಲಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಮಾಸ್ತಿಕಟ್ಟೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಪುರಸಭಾ ವ್ಯಾಪ್ತಿಯ ಮಾಸ್ತಿಕಟ್ಟೆಯ ನಿವಾಸಿ ಶಿವರಾಮ್ ಶೆಟ್ಟಿ (85) ಮೃತಪಟ್ಟವರು.
ಮಾವಿನ ಕಾಯಿಯ ವ್ಯಾಪಾರ ಮಾಡುತ್ತಿದ್ದ ಶಿವರಾಮ್ ಅವರು ತಮ್ಮ ಮನೆಯ ಸಮೀಪವಿದ್ದ ಮರದಿಂದ ಮಾವಿನಕಾಯಿಗಳನ್ನು ಕೀಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದು ಸಂಜೆ ವೇಳೆಗೆ ಮನೆಯವರ ಗಮನಕ್ಕೆ ಬಂದಿದೆ. ಎರಡು ಗೋಣಿ ಚೀಲದಲ್ಲಿ ಮಾವಿನ ಕಾಯಿಗಳನ್ನು ಕೆಳಕ್ಕೆ ಇಳಿಸಿದ ಸ್ಥಿತಿಯಲ್ಲಿತ್ತು.
ಶಿವರಾಮ್ ಅವರು ಈ ಹಿಂದೆ ಟೂರಿಸ್ಟ್ ವಾಹನ, ಆಟೋವನ್ನು ಹೊಂದಿದ್ದು ಅದರಲ್ಲಿ ದುಡಿಯುತ್ತಿದ್ದರೆನ್ನಲಾಗಿದೆ. ಆದರೆ ಇದೀಗ ಮಾವಿನ ಕಾಯಿಗಳನ್ನು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಅವರು ಎರಡು ಏಣಿಗಳನ್ನು ಬೇರೆ ಬೇರೆ ಮರಗಳಿಗೆ ಬಳಸಿ ಆ ಮೂಲಕ ಮರಕ್ಕೆ ಹತ್ತಿದ್ದಾರೆನ್ನಲಾಗಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
