ಮೂಡುಬಿದಿರೆಯಲ್ಲಿ ಅಕ್ರಮವಾಗಿ ಗೋ ಸಾಗಾಟ: ಪೊಲೀಸರಿಂದ ಗೋವುಗಳ ರಕ್ಷಣೆ, ವಾಹನ ವಶಕ್ಕೆ
ಮೂಡುಬಿದಿರೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕಿ ಪ್ರತಿಭಾ ಕೆ.ಸಿ ಅವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ, ತೋಡಾರು ಕಡೆಗೆ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ತೋಡಾರು ಗ್ರಾಮದ ದ್ವಾರದ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಆ ಸಮಯದಲ್ಲಿ ಗರಡಿ ಕಡೆಯಿಂದ ಬಂದ ಕೆ.ಎ-19-ಎಂ.ಎ-7854 ನಂಬರಿನ ವ್ಯಾಗನರ್ ಕಾರು ಮತ್ತು ಅದರ ಹಿಂದೆಯೇ ಬಂದ ಕೆ.ಎ-19-ಎ.ಎ-1106 ನಂಬರಿನ ಪಿಕಪ್ ವಾಹನವನ್ನು ನಿಲ್ಲಿಸುವಂತೆ ಸೂಚಿಸಲಾಯಿತು. ಆದರೆ ವಾಹನ ಸವಾರರು ನಿಲ್ಲಿಸದೆ ಮುಂದೆ ಚಲಾಯಿಸಿದರು.
ಪೊಲೀಸರು ವಾಹನಗಳನ್ನು ಬೆನ್ನಟ್ಟಿ ಹೋಗಿ ಅಡ್ಡಗಟ್ಟಿದರು. ಪಿಕಪ್ ವಾಹನದ ಚಾಲಕ ಹರ್ಷದ್ ಮತ್ತು ಇತರರು ಅಲ್ಲಿಂದ ಓಡಿ ಪರಾರಿಯಾದರು.
ಪಿಕಪ್ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ವ್ಯಾಗನರ್ ಕಾರಿನ ಚಾಲಕ ಸಫರ್ ಮತ್ತು ಹಂಡೇಲು ನಿವಾಸಿ ಅಬೂಬಕರ್ ಕೂಡ ಸ್ಥಳದಿಂದ ಓಡಿ ಪರಾರಿಯಾದರು. ಪಿಕಪ್ ವಾಹನವನ್ನು ಪರಿಶೀಲಿಸಿದಾಗ, ಎರಡು ಹಸು, ಎರಡು ಗಂಡು ದನಗಳು ಹಾಗೂ ನಾಲ್ಕು ಕರುಗಳನ್ನು ಹಿಂಸಾತ್ಮಕವಾಗಿ ಕಾಲು ಹಾಗೂ ತಲೆಯನ್ನು ಹಗ್ಗದಿಂದ ಕಟ್ಟಿ ತುಂಬಿಸಲಾಗಿತ್ತು.
ಪೊಲೀಸರು ಎಂಟು ಜಾನುವಾರುಗಳನ್ನು ರಕ್ಷಿಸಿ ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದರು. ಆರೋಪಿಗಳು ಕಳ್ಳತನದ ಜಾನುವಾರುಗಳನ್ನು ಅಬೂಬಕರ್ ಎಂಬುವವರ ಮನೆಗೆ ಸಾಗಿಸಿ, ಅಲ್ಲಿ ವಧೆ ಮಾಡಿ ಮಾಂಸ ಮಾರಾಟ ಮಾಡುವ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.