ಉತ್ತಮ ಬದುಕಿಗೆ ಶಿಕ್ಷಣವೇ ಅಡಿಪಾಯ: ಯು.ಟಿ. ಖಾದರ್
ಅವರು ಇಲ್ಲಿನ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ ಸಂಭ್ರಮಾಚರಣೆಯ ಎರಡನೇ ದಿನವಾದ ಆದಿತ್ಯವಾರ ಹಳೆವಿದ್ಯಾರ್ಥಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಎಸ್.ಎನ್ ಮೂಡುಬಿದಿರೆ ಅವರಂತಹ ಹಿರಿಯರ ತ್ಯಾಗ ಮತ್ತು ಪರಿಶ್ರಮದಿಂದ ಮಹಾವೀರ ಕಾಲೇಜು ವಜ್ರಮಹೋತ್ಸವವನ್ನು ಪೂರೈಸಲು ಸಾಧ್ಯವಾಗಿದೆ. ಆಗಿನ ಕಾಲದಲ್ಲಿ ಮೂಡುಬಿದಿರೆ ಪರಿಸರದ ಗ್ರಾಮೀಣ ಜನರಿಗೆ ಶಿಕ್ಷಣದ ಆವಕಾಶವನನ್ನು ಒದಗಿಸಿಕೊಟ್ಟಿದ್ದೆ ಮಹಾವೀರ ಕಾಲೇಜು. ಬಲಿಷ್ಟ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿ ಶಕ್ತಿಯೆ ದೊಡ್ಡ ಕೊಡುಗೆ ಎಂದರು.
ಮಹಾವೀರ ಕಾಲೇಜಿನಲ್ಲಿ ಎರಡು ವರ್ಷದ ಪಿಯುಸಿ ಶಿಕ್ಷಣದಲ್ಲಿ ನಾನು ಕುಟುಂಬ ಪ್ರೀತಿಯನ್ನು ಕಲಿತುಕೊಂಡೆ. ಇಲ್ಲಿನ ವಿಶಾಲ ಮೈದಾನ ನನ್ನ ಕ್ರೀಡಾ ಆಸಕ್ತಿಯನ್ನು ಹೆಚ್ಚಿಸಿತು. ಓದಿನಲ್ಲಿ ಹಿಂದಿದ್ದರು ನಾಯಕತ್ವದ ಗುಣ, ಆತ್ಮಸ್ಥೖಯ೯ ಇನ್ನಿತರ ಜೀವನ ಮೌಲ್ಯದ ಶಿಕ್ಷಣವನ್ನು ಈ ಕಾಲೇಜಿನಲ್ಲಿ ಕಲಿತೆ. ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಮಹಾವೀರ ಕಾಲೇಜಿನ ಶಿಕ್ಷಣ ಪ್ರೇರಣೆಯಾಗಿದೆ ಎಂದರು.
ಕಾಲೇಜಿನ ವತಿಯಿಂದ ಯು.ಟಿ ಖಾದರ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಕಾಲೇಜು ನಡೆದು ಬಂದ ದಾರಿಯನ್ನು ವಿವರಿಸಿ ಕಾಲೇಜಿನ ಬೆಳವಣಿಗೆಗೆ ಊರವರ ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರವನ್ನು ಕೋರಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಭರತನಾಟ್ಯ ವಿದುಷಿ ವಸುಂಧರಾ ದೊರೆಸ್ವಾಮಿ, ಉದ್ಯಮಿಗಳಾದ ಆನಂದ ಎಂ. ಶೆಟ್ಟಿ, ಸಂಜಯ್ ಎ. ಭಟ್, ಸುಧಾಕರ ಕುಂದರ್, ಮೋಹನ್‌ದಾಸ್ ಶೆಟ್ಟಿ, ಪದವಿ ಕಾಲೇಜಿನ ಪ್ರಾಚಾರ್ಯ ರಾಧಾಕೃಷ್ಣ ಶೆಟ್ಟಿ, ಪಪೂ ಕಾಲೇಜಿನ ಪ್ರಾಚಾರ್ಯೆ ವಿಜಯಲಕ್ಷ್ಮಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೊ.ರಮೇಶ್ ಭಟ್ ಮತ್ತಿತರರು ಇದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.