ಕರ್ನಾಟಕ-ಕೇರಳ ಸಂಪರ್ಕ ಸೇತುವೆಗೆ 20 ಕೋಟಿ ರೂ. ಮಂಜೂರು
ಮಾಣಿಲ ಗ್ರಾಮದ ಕಾಮಜಾಲು-ಪೂವನಡ್ಕ ಎಂಬಲ್ಲಿ ಸಿರಿಯ ನದಿಗೆ ಸೇತುವೆ ನಿರ್ಮಾಣ ಮಾಡಬೇಕು ಎನ್ನುವುದು ಈ ಭಾಗದ ಜನತೆಯ 30 ವರ್ಷಗಳ ಕನಸಾಗಿತ್ತು. ಕಳೆದ ಚುನಾವಣೆಯ ಸಂದರ್ಭ ಶಾಸಕ ಅಶೋಕ್ ರೈ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ಅನುದಾನ ಮಂಜೂರುಗೊಳ್ಳುವುದರೊಂದಿಗೆ ಶಾಸಕರು ಕೊಟ್ಟ ಮಾತನ್ನು ಉಳಿಸಿಕೊಂಡಂತಾಗಿದೆ.ಳೀ ನೂತನ ಸೇತುವೆ ನಿರ್ಮಾಣದಿಂದ ಕರ್ನಾಟಕಕ್ಕೆ ಸೇರಿದ ಮಾಣಿಲ, ವಿಟ್ಲ ಭಾಗದ ಜನರು ನದಿಯ ಆಚೆ ದಡದಲ್ಲಿರುವ ಗ್ರಾಮಕ್ಕೆ ಭೇಟಿಯಾಗಬೇಕಾದಲ್ಲಿ 28 ಕಿ ಮೀ ಸಂಚರಿಸಬೇಕಿತ್ತು. ಮಾಣಿಲದಿಂದ ಕಾಸರಗೋಡು ಜಿಲ್ಲೆಯ ಪೆರ್ಲಕ್ಕೆ ಅತೀ ಹತ್ತಿರವಿದೆ ಆದರೆ ದಾರಿ ಮಾತ್ರ ದೂರವಾಗಿತ್ತು. ಇಲ್ಲಿನ ನದಿಗೆ ಸೇತುವೆ ನಿರ್ಮಾಣ ಮಾಡಿ ಎಂದು ಎರಡೂ ರಾಜ್ಯದ ಜನತೆ ಯಾರಿಗೆಲ್ಲಾ ಮನವಿ ಕೊಡಬೇಕೋ ಅವರನ್ನೆಲ್ಲಾ ಹುಡುಕಿ ಮನವಿಯನ್ನು ನೀಡಿ ಸೇತುವೆಯ ನಿರ್ಮಾಣಕ್ಕೆ ಸಹಕರಿಸಿ ಎಂದು ಕಳೆದ 30 ವರ್ಷಗಳಿಂದ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಂಡುಬಂದಿತ್ತು.
ಗೆದ್ದರೆ ಖಂಡಿತಾ ಬೇಡಿಕೆ ಈಡೇರಿಸುವೆ ಎಂದಿದ್ದ ಅಶೋಕ್ ರೈ:
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಾಣಿಲ ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅಶೋಕ್ ರೈ ಅವರಲ್ಲಿ ಈ ಗ್ರಾಮಸ್ಥರು ಸೇತುವೆಯ ಬೇಡಿಕೆ ಇಟ್ಟಿದ್ದರು. ನನ್ನನ್ನು ಗೆಲ್ಲಿಸಿ ನಾನು ಗೆದ್ದರೆ ಖಂಡಿತವಾಗಿಯೂ ನಿಮ್ಮ ಬೇಡಿಕೆಯನ್ನು ಈಡೇರಿಸುವೆ ಎಂದು ಚುನಾವಣಾ ಸಂದರ್ಭದಲ್ಲಿ ಮಾತುಕೊಟ್ಟಿದ್ದರು. ಸಾಕಷ್ಟು ಬಾರಿ ಶಾಸಕರಿಗೆ ಸಚಿವರಿಗೆ ಮನವಿ ನೀಡಿ ನಂಬಿಕೆ ಕಳೆದುಕೊಂಡಿದ್ದ ಮಾಣಿಲ ಗ್ರಾಮಸ್ಥರ ಭರವಸೆ ಪಟ್ಟಿಗೆ ಅಶೋಕ್ ರೈ ಭರವಸೆಯೂ ಸೇರಿತ್ತು. ಆದರೆ ಅಶೋಕ್ ರೈ ಅವರು ಚುನಾವಣೆಯಲ್ಲಿ ಗೆದ್ದ ಕೆಲವೇ ತಿಂಗಳಲ್ಲಿ ಸಿರಿಯ ನದಿಗೆ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಹಾಗೂ ಇದರ ಸಾಧಕ ಬಾಧಕಗಳ ಬಗ್ಗೆ ಸರ್ವೆಯನ್ನು ಮಾಡಿಸಿದ್ದರು. ಸೇತುವೆ ನಿರ್ಮಾಣ ಖಂಡಿತಾ ಮಾಡುತ್ತೇನೆ ಎಂದು ಶಾಸಕರಾದ ಬಳಿಕ ಮತ್ತೆ ಭರವಸೆ ನೀಡಿದ್ದರು. ಇದೀಗ ಸರಕಾರದ ಮೇಲೆ ಒತ್ತಡ ಹಾಕಿ 20 ಕೋಟಿ ಮಂಜೂರು ಮಾಡಿಸಿದ್ದಾರೆ. ಈ ನೂತನ ಸೇತುವೆ ನಿರ್ಮಾಣದ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕರೆದುಕೊಂಡು ಬಂದು ಪರಿಶೀಲನೆ ನಡೆಸಿದ್ದರು.
80 ಮೀ ಉದ್ದ 10 ಮೀ ಅಗಲ:
ಸಿರಿಯ ನದಿಗೆ ಸುಮಾರು 80 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಲಿದ್ದು ಇದು 10 ಮೀಟರ್ ಅಗಲವನ್ನು ಹೊಂದಿರುತ್ತದೆ. ಕರ್ನಾಟಕ ಗಡಿಯ ಮೂಲಕ ಸೇತುವೆಯ ಸಂಪರ್ಕಕ್ಕೆ 1.5 ಕಿ ಮೀ ರಸ್ತೆಯ ನಿರ್ಮಾಣವಾದರೆ ಕೇರಳ ಸಂಪರ್ಕಕ್ಕೆ ಒಂದು ಕಿ ಮೀ ರಸ್ತೆ ನಿರ್ಮಾಣವೂ ಆಗಬೇಕಿದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಕಾರಣ ಸೇತುವೆ ಎತ್ತರದಿಂದ ನಿರ್ಮಾಣವಾಗಲಿದೆ.
ಮತ್ತೆ ಆರು ಕೋಟಿಯ ಪ್ರಸ್ತಾವನೆ:
ಮಾಣಿಲದಲ್ಲಿ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ 20 ಕೋಟಿ ಅನುದಾನ ಮಂಜೂರು ಮಾಡಿದೆ, ಗ್ರಾಮಸ್ಥರಿಗೆ ಸೇತುವೆ ನಿರ್ಮಾಣದ ಮಾತುಕೊಟ್ಟಿದ್ದೆ ಅದನ್ನು ಈಡೇರಿಸಿದ ತೃಪ್ತಿ ನನಗಿದೆ. ಸೇತುವೆಯ ಸಂಪರ್ಕ ಮಾಡುವ ಎರಡೂ ಭಾಗದಲ್ಲಿ ಉತ್ತಮ ರಸ್ತೆಯ ನಿರ್ಮಾಣವಾಗಬೇಕಿದೆ ಇದಕ್ಕೆ ಹೆಚ್ಚುವರಿ 6 ಕೋಟಿ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ ಇದು ಶೀಘ್ರವೇ ಮಂಜೂರಾತಿಯ ನಿರೀಕ್ಷೆ ಇದೆ. ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.