ಸಂತ ಫಿಲೋಮಿನಾ ಕಾಲೇಜಿನಲ್ಲಿ ನವೀನತೆಗೆ ಹೊಸ ವೇದಿಕೆ: ಎನ್‌ಎಐಎನ್ ಕೇಂದ್ರದಿಂದ ವಿದ್ಯಾರ್ಥಿಗಳ ಉದ್ಯಮಶೀಲ ಕನಸುಗಳಿಗೆ ರೆಕ್ಕೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ ನವೀನತೆಗೆ ಹೊಸ ವೇದಿಕೆ: ಎನ್‌ಎಐಎನ್ ಕೇಂದ್ರದಿಂದ ವಿದ್ಯಾರ್ಥಿಗಳ ಉದ್ಯಮಶೀಲ ಕನಸುಗಳಿಗೆ ರೆಕ್ಕೆ


ಪುತ್ತೂರು: ನವೀನ ಆಲೋಚನೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಮಹತ್ವದ ಹೆಜ್ಜೆ ಇಟ್ಟಿದ್ದು, ಕರ್ನಾಟಕ ಸರ್ಕಾರದ ಐಟಿ/ಬಿಟಿ ಇಲಾಖೆಯ ಸಹಯೋಗದೊಂದಿಗೆ ಕಾಲೇಜಿನಲ್ಲಿ ‘ನ್ಯೂ ಏಜ್ ಇಂಕ್ಯೂಬೇಶನ್ ನೆಟ್ವರ್ಕ್’ (NAIN) ಕೇಂದ್ರವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ. 


2024-25ನೇ ಶೈಕ್ಷಣಿಕ ವರ್ಷದಲ್ಲಿ ಸಂತ ಫಿಲೋಮಿನಾ ಕಾಲೇಜು NAIN ಕೇಂದ್ರವನ್ನು ಸ್ಥಾಪಿಸಿ NAIN Host Institution ಆಗಿ ಗುರುತಿಸಲ್ಪಟ್ಟಿದೆ. ಈ ಮೂಲಕ ಕಾಲೇಜು NAIN ಯೋಜನೆಯಡಿ ಗುರುತಿಸಲ್ಪಟ್ಟ ರಾಜ್ಯದ ಏಕೈಕ ಪದವಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 


ಸುಮಾರು 2000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ಕೇಂದ್ರದಲ್ಲಿ ಆಧುನಿಕ ಕಂಪ್ಯೂಟರ್ ಲ್ಯಾಬ್, ವೇಗವಾದ ಇಂಟರ್ನೆಟ್ ಹಾಗೂ ಸಹಕಾರಾತ್ಮಕ ಕಾರ್ಯಕ್ಷೇತ್ರಗಳನ್ನು ಒದಗಿಸಲಾಗಿದೆ. ಎಡ್ಟೆಕ್, ಹೆಲ್ತ್ಟೆಕ್ ಹಾಗೂ ಅಗ್ರಿಟೆಕ್ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ನವೀನ ಆಲೋಚನೆಗಳನ್ನು ಸ್ಟಾರ್ಟ್‌ಅಪ್‌ಗಳಾಗಿ ರೂಪಿಸಲು ಈ ಕೇಂದ್ರವು ವೇದಿಕೆ ಕಲ್ಪಿಸುತ್ತದೆ. ಕಾಲೇಜಿನಲ್ಲಿ ಇನ್ಸ್ಟಿಟ್ಯೂಷನ್ ಇನೋವೇಶನ್ ಕೌನ್ಸಿಲ್ (IIC) ಮೂಲಕ ವಿವಿಧ ಕಾರ್ಯಾಗಾರಗಳು, ಹ್ಯಾಕಥಾನ್‌ಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಸ್ಟಾರ್ಟ್‌ಅಪ್ ಸಂಸ್ಕೃತಿಯನ್ನು ಉತ್ತೇಜಿಸಲಾಗುತ್ತಿದೆ.


ಈ ಯೋಜನೆಯಡಿ ವಿದ್ಯಾರ್ಥಿಗಳಿಂದ ಬಂದ ನವೀನ ಆಲೋಚನೆಗಳನ್ನು ಆಯ್ಕೆ ಮಾಡಿ ಅವುಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಲಾಗುತ್ತದೆ. ಕಾಲೇಜು ಮಟ್ಟದಲ್ಲಿ ನಡೆಸಲಾದ ಹ್ಯಾಕಥಾನ್‌ನಲ್ಲಿ ಒಟ್ಟು 15 ನವೀನ ಆಲೋಚನೆಗಳು ಬಂದಿದ್ದು, ಅವುಗಳಲ್ಲಿ 10 ಅತ್ಯುತ್ತಮ ಪ್ರಾಜೆಕ್ಟ್‌ಗಳನ್ನು ಇಂಕ್ಯೂಬೇಶನ್ ಹಂತಕ್ಕೆ ಆಯ್ಕೆ ಮಾಡಲಾಗಿದೆ. ಈ ಯೋಜನೆಗಳ ಅಭಿವೃದ್ಧಿಗೆ ಸರ್ಕಾರವೇ ಹಣಕಾಸಿನ ನೆರವು ನೀಡುತ್ತಿದೆ. 


ವಿದ್ಯಾರ್ಥಿಗಳಿಗೆ ಪ್ರಾರಂಭದಲ್ಲಿ ಪುತ್ತೂರಿನ ಉದ್ಯಮಿ ಕೃಷ್ಣ ಮೋಹನ್ ಪಿ.ಎ. ಅವರು ತರಬೇತಿ ನೀಡಿದರು. ನಂತರ ಬೆಂಗಳೂರಿನ ಸ್ಟಾರ್ಟಪ್ ಮಾರ್ಗದರ್ಶಕರಾದ ಮಧುರನಾಥ್ ಆರ್ ಮತ್ತು ಐಟಿ ಸಲಹೆಗಾರ ಸಚಿನ್ ಎಸ್.ಆರ್. ಅವರು ಮಾರ್ಗದರ್ಶನ ನೀಡಿದರು. ಅವರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಿಕೊಳ್ಳಲು ಸಾಧ್ಯವಾಯಿತು.

ಮುಂದಿನ ಹಂತದಲ್ಲಿ, ಯೋಜನೆಗಳನ್ನು ಡಾ. ಲಕ್ಷ್ಮಿ ಜಗನ್ನಾಥನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ), IIITB ಇನೋವೇಶನ್ ಸೆಂಟರ್ ಮತ್ತು ಮನು ಗೌಡ ಎಂ.ಎಸ್., ಪ್ರಾಜೆಕ್ಟ್ ಮ್ಯಾನೇಜರ್, ಅವರು ಮೇಲ್ವಿಚಾರಣೆ ಮಾಡಿದರು. ಅವರು ಆನ್ಲೈನ್ ಮೂಲಕ ಪ್ರಾಥಮಿಕ ಮಾರ್ಗದರ್ಶನ ನೀಡಿದರು ಮತ್ತು ನಂತರದ ದಿನಗಳಲ್ಲಿ ಕಾಲೇಜಿಗೆ ಭೇಟಿ ನೀಡಿ ಯೋಜನೆಗಳನ್ನು ಇನ್ನಷ್ಟು ಸಲಹೆ ಸೂಚನೆಗಳನ್ನು ನೀಡಿ ಉತ್ತಮಪಡಿಸಿದರು.

ಡಿಐಎ ಅಭಿಷೇಕ್ ಸುವರ್ಣ, ಯೋಜನಾ ಸಂಯೋಜಕರಾದ ಡಾ. ವಿನಯಚಂದ್ರ ಹಾಗೂ ಮೆಂಟರ್ಗಳಾದ ಡಾ. ಗೀತಾ ಪೂರ್ಣಿಮಾ ಕೆ., ಅಕ್ಷತಾ ಬಿ., ಸುರಕ್ಷಾ ಎಸ್., ನೀಲಂ ಕುಟ್ಟಪ್ಪ ಮತ್ತು ಫಾತಿಮತ್ ಸಾನಿದಾ ಅವರ ಸಹಕಾರದೊಂದಿಗೆ ಈ ಯೋಜನೆಗಳು ಸಿದ್ಧಗೊಂಡಿವೆ. ಕಾಲೇಜಿನ ಪರೀಕ್ಷಾಂಗ ಉಪಕುಲಸಚಿವ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೆರಾರವರು ಸರ್ವರೀತಿಯ ಸಹಕಾರ ನೀಡಿರುತ್ತಾರೆ. 


ಸಂತ ಫಿಲೋಮಿನಾ ಕಾಲೇಜಿನ NAIN ಕೇಂದ್ರದ ವಿಶೇಷತೆಗಳು:

ವಿಸ್ತೀರ್ಣ: ಸುಮಾರು 2000 ಚದರ ಅಡಿ

ಯೋಜನೆ: ಕರ್ನಾಟಕ ಸರ್ಕಾರದ IT/BT ಇಲಾಖೆಯ NAIN ಉಪಕ್ರಮ

ಆಯ್ಕೆಯಾದ ಪ್ರಾಜೆಕ್ಟ್‌ಗಳು: 10

ಹಣಕಾಸು ಸಹಾಯ: ಕರ್ನಾಟಕ ಸರ್ಕಾರ

ಪ್ರಮುಖ ಕ್ಷೇತ್ರಗಳು: ಎಡ್ಟೆಕ್, ಹೆಲ್ತ್ಟೆಕ್, ಅಗ್ರಿಟೆಕ್

ಮೂಲಸೌಕರ್ಯ: ಕಂಪ್ಯೂಟರ್ ಲ್ಯಾಬ್, ಕಚೇರಿ ವ್ಯವಸ್ಥೆ, ಸಭಾಂಗಣ, ವೇಗವಾದ ಇಂಟರ್ನೆಟ್

ಪ್ರಮುಖ ಚಟುವಟಿಕೆಗಳು: ಹ್ಯಾಕಥಾನ್, ಐಡಿಯೇಷನ್ ಬೂಟ್ಕ್ಯಾಂಪ್, ಐಪಿಆರ್ ಜಾಗೃತಿ ಕಾರ್ಯಕ್ರಮಗಳು, ಉದ್ಯಮಶೀಲತಾ ಕಾರ್ಯಾಗಾರಗಳು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article