ಸುಳ್ಯ ಸಮೀಪ ಕಲ್ಚರ್ಪೆಯಲ್ಲಿ ಬಾವಿಗೆ ಬಿದ್ದ ಕಾಡಾನೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಮೂಲಕ ಕಾಡಾನೆ ರಕ್ಷಣೆ
ಘೀಳಿಡುತ್ತಾ ಮೇಲಕ್ಕೆ ಬಂದ ಆನೆಯು ತೋಟದ ಕೆಳ ಭಾಗಕ್ಕೆ ವಸತಿ ಪ್ರದೇಶದತ್ತ ಓಡಿತು. ಇದರಿಂದ ಕೆಲ ಕಾಲ ಆತಂಕ ಸೃಷ್ಠಿಯಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಯನ್ನು ದೂರಕ್ಕೆ ಸರಿಸುವ ಪ್ರಯತ್ನ ನಡೆಸಿತು. ವಸತಿ ಪ್ರದೇಶದತ್ತ ಓಡಿದ ಆನೆ ಬಳಿಕ ಹಿಂತಿರುಗಿ ಬಂದು ಪೂಮಲೆ ಕಾಡಿನತ್ತ ಹೆಜ್ಜೆಯಿಟ್ಟಿತ್ತು. ಸುಮಾರು ೫ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಆನೆಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿ ಕಾಡಿಗೆ ಬಿಡಲಾಯಿತು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ. ಕರಿಕಾಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಮರಿಯಪ್ಪ, ಪ್ರೊಬೇಷನರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂಕೇತ್, ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ., ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು, ಅರಣ್ಯ ವೀಕ್ಷಕರು, ಆನೆ ಕಾರ್ಯಪಡೆ ಸಿಬ್ಬಂದಿಗಳು ಸೇರಿ ನೂರಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪೊಲೀಸ್, ಅಗ್ನಿಶಾಮಕ ಸಳ, ಪಶು ವೈದ್ಯಕೀಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಕಾರ ನೀಡಿದರು.

