ಎ.18ರಂದು ನಡೆಯಬೇಕಿದ್ದ ಹರೇಕಳದ ಸೂರ್ಯ-ಚಂದ್ರ ಜೋಡುಕೆರೆ ಕಂಬಳ ಮುಂದಿನ ವರ್ಷಕ್ಕೆ ಮುಂದೂಡಿಕೆ
ಉಳ್ಳಾಲ: ಹರೇಕಳದಲ್ಲಿ ಎ. 18ರಂದು ಜರುಗಬೇಕಿದ್ದ ಸೂರ್ಯ-ಚಂದ್ರ ಜೋಡುಕೆರೆ ಕಂಬಳವನ್ನು ಕಂಬಳ ಆಯೋಜಕರಿಗೆ ಸೂತಕದ ಛಾಯೆ ಆವರಿಸಿರುವುದರಿಂದ ಸೂತಕದ ವಾತಾವರಣದಲ್ಲಿ ಮನರಂಜನೆ ಸೂಕ್ತವಲ್ಲ ಎಂದು ಈ ವರ್ಷ ಕೈಬಿಟ್ಟು ಮುಂದಿನ ವರ್ಷ ಆಯೋಜಿಸಲಾಗುವುದು ಎಂದು ಹರೇಕಳ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಅವರು ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹರೇಕಳದಲ್ಲಿ ಎ. 18ರಂದು ಸೂರ್ಯ-ಚಂದ್ರ ಕಂಬಳ ನಡೆಸಲು ಎಲ್ಲ ಸಿದ್ಧತೆ ನಡೆಸಲಾಗಿತ್ತು. ಆದಾಗಲೇ 800ಮಂದಿ ಸದಸ್ಯರನ್ನೊಳಗೊಂಡ ಸಮಿತಿ, ಉಪಸಮಿತಿಯ ಮೂಲಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯ ಕೂಡಾ ನಡೆದಿತ್ತು. ಹಲವು ಲಕ್ಷ ರೂ. ಖರ್ಚು ಮಾಡಿ ಕಂಬಳ ಸಿದ್ಧತೆ ಕೈಗೊಂಡಿರುವ ಮಧ್ಯೆಯೇ ವಯೋಸಹಜವಾಗಿ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಪಿತೃಶ್ರೀ ಪ್ರಗತಿಪರ ಕೃಷಿಕ ಉಳಿದೊಟ್ಟು ಕೊರಗಪ್ಪ ಶೆಟ್ಟಿ ಅವರ ಅಗಲುವಿಕೆಯ ಕಾರಣದಿಂದ ಧಾರ್ಮಿಕ ಹಿನ್ನೆಲೆಯಲ್ಲಿ ಸೂತಕದಲ್ಲಿ ಕಂಬಳ ನಡೆಸುವುದು ಸೂಕ್ತವಲ್ಲ ಎಂದು ಕಂಬಳ ಸಮಿತಿ ನಿರ್ಣಯದಂತೆ ಸೂರ್ಯ-ಚಂದ್ರ ಜೋಡುಕೆರೆ ಕಂಬಳ ಮುಂದಿನ ವರ್ಷ ನಡೆಸಲು ಯೋಜಿಸಲಾಗಿದೆ ಎಂದರು.
ಪ್ರಾಕೃತಿಕವಾಗಿ ಹರೇಕಳ ಕಂಬಳಗದ್ದೆ ನೇತ್ರಾವತಿ ನದಿಗೆ ಸಮೀಪವಿದ್ದು ನೀರಿನ ಹರಿವು ಜಾಸ್ತಿ ಇರುವ ಕಾರಣದಿಂದ ನಿಗದಿತ ತಿಂಗಳಲ್ಲೇ ಕಂಬಳ ನಡೆಸಬೇಕಾದ ಅನಿವಾರ್ಯತೆ ಇದ್ದು ಕೊರಗಪ್ಪ ಶೆಟ್ಟಿ ಅವರ ಸಾವು ಸಂಭವಿಸಿದ ಕಾರಣದಿಂದ ಬೇರೆ ದಿನಗಳಲ್ಲಿ ಮಾಡಲು ಅದಕ್ಕೂ ಸೂತಕದ ದಿನ ತಪ್ಪುವುದಿಲ್ಲ. ಇತರ ದಿನಗಳಲ್ಲಿ ಜಿಲ್ಲಾ ಕಂಬಳ ಸಮಿತಿ ಬೇರೆ ಕಂಬಳಕ್ಕೆ ದಿನ ನಿಗದಿಗೊಳಿಸಿದ್ದು ನಂತರ ಮಳೆ ಬಂದರೆ ಗದ್ದೆಯಲ್ಲಿ ನೀರು ತುಂಬುವ ಸಾಧ್ಯತೆ ಹೆಚ್ಚಿದ್ದು ಆ ಕಾರಣದಿಂದ ಈ ವರ್ಷ ಕಂಬಳ ನಡೆಸಲೆಂದು ಅದೆಷ್ಟು ಲಕ್ಷ ರೂ. ಖರ್ಚಾಗಿದ್ದರೂ ಪರವಾಗಿಲ್ಲ, ಸೂತಕದ ವಾತಾವರಣದಲ್ಲಿ ಮನರಂಜನೆ ಬೇಡ ಎಂದು ಮುಂದಿನ ವರ್ಷ ಕಂಬಳ ನಡೆಸುವ ಹಂತಕ್ಕೆ ಬರಲಾಗಿದೆ. ಹಾಗಾಗಿ ಕಂಬಳ ಕೋಣಗಳ ಯಜಮಾನರುಗಳು, ಕಂಬಳಾಭಿಮಾನಿಗಳು ಸಹಕರಿಸಬೇಕು ಎಂದು ವಿನಂತಿಸಿದರು.
ಕಂಬಳ ಸಮಿತಿ ಗೌರವಾಧ್ಯಕ್ಷ ಮೋಹನ್‌ದಾಸ್ ರೈ ದೆಬ್ಬೇಲಿಗುತ್ತು, ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರು, ಉಪಾಧ್ಯಕ್ಷ ಬದ್ರುದ್ದಿನ್ ಹರೇಕಳ, ಪ್ರಧಾನ ಕಾರ್ಯದರ್ಶಿ ವಾಮನ್‌ರಾಜ್ ಪಾವೂರು, ಅರ್ಜುನ್ ಆರ್. ಶೆಟ್ಟಿ ಹಾಗೂ ಕೋಶಾಧಿಕಾರಿ ಸುಧಾಕರ್ ಬೈತಾರ್ ಉಪಸ್ಥಿತರಿದ್ದರು.