ಕುಡಿಯುವ ನೀರಿಗಾಗಿ ಬಂಟ್ವಾಳ ಪುರಸಭೆಯ ಮುಂದೆ ಪ್ರತಿಭಟನೆ
ಪುರಸಭೆಯ ಮುಂಭಾಗದಲ್ಲಿ ಪ್ರತಿಭನಾಕಾರರು ಬಟ್ಟೆಗಳನ್ನು ನೇತಾಕಿ, ಖಾಲಿ ಕೊಡಪಾನ ಹಾಗೂ ಬಕೆಟ್ ಗಳನ್ನಿರಿಸಿ ಪುರಸಭಾಧಿಕಾರಿಗಳಿಗೆ ಧಿಕ್ಕಾರ ಕೂಗಿದರು.
ಸ್ಥಳೀಯ ನಿವಾಸಿ ಕಬೀರ್ ಆಹಮ್ಮದ್ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಕೌಡೇಲು ಹಾಗೂ ರಂಗೇಲ್ ಭಾಗದ ನಿವಾಸಿಗಳಿಗೆ ಕುಡಿಯವ ನೀರು ಸಮರ್ಪಕವಾಗಿ ಪೂರೈಕೆಯಾಗದೆ ತೊಂದರೆ ಅನುಭವಿಸುತ್ತಿದ್ದರೂ,ಈ ಭಾಗದ ಸದಸ್ಯರು ಮತ್ತು ಅಧಿಕಾರಿಗಳು ಯಾವುದೇ ಸ್ಪಂದಿಸದೆ ನಮನ್ನು ಪ್ರತ್ಯೇಕವಾಗಿ ನೋಡುತ್ತಿದ್ದಾರೆ ಎಂದು ದೂರಿದರು.
ಈ ಸಮಸ್ಯೆಯ ಬಗ್ಗೆ ಪುರಸಭೆಗೆ ಲಿಖಿತವಾಗಿ ಮನವಿಗಳನ್ನು ನೀಡಿದಲ್ಲದೆ ಸಮಸ್ಯೆಯನ್ನು ವಿವರಿಸಿದರೂ ಈ ವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಸಂದರ್ಭದಲ್ಲಿ ಮತ ಯಾಚೆಗೆ ಮನೆ ಬಾಗಿಲಿಗೆ ಬರುವ ರಾಜಕೀಯ ನಾಯಕರು ಕೂಡ ನೀರಿನ ಸಮಸ್ಯೆಯಿಂದ ನಾವು ತತ್ತರಿಸಿದರೂ ಕೇಳು ಸೌಜನ್ಯವನ್ನುಮಾಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆಯ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಪ್ರತಿಭಟನಾಕಾರರ ಜೊತೆ ಮಾತನಾಡಿ, ಪ್ರಾಜೆಕ್ಟ್ ನಡೆಯುತ್ತಿದ್ದರಿಂದ ಇಲ್ಲಿ ನೀರಿನ ಸಮಸ್ಯೆಯಾಗಿದ್ದು, ತಾಂತ್ರಿಕ ತೊಂದರೆ ಇದೆ ಎಂದು ಸಮಜಾಯಿಷಿ ನೀಡಿದಾಗ ತಾಂತ್ರಿಕ ಸಮಸ್ಯೆಯ ಬಗ್ಗೆ ನಮಗೆ ಅಗತ್ಯವಿಲ್ಲ ನಮಗೆ ಕುಡಿಯಲು ನೀರು ಕೊಡಿ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಕೆಲ ಹೊತ್ತು ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.ಆಗ ಬಂದೋಬಸ್ತಿನಲ್ಲಿದ್ದ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಯಾಗಿಸಿದರು.
ಬಳಿಕ ಕಚೇರಿಯೊಳಗೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಹಾಗೂ ಪ್ರಮುಖರ ಜೊತೆಗೆ ಮಾತುಕತೆ ನಡೆಸಲಾಯಿತು.ಅಧಿಕಾರಿಗಳಿಂದ ಕುಡಿಯುವ ನೀರಿನ ಸಮಸ್ಯೆಯ ಪರಿಹಾರದ ಭರವಸೆ ಸಿಕ್ಕಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.