ಸಿಇಟಿ ಪರೀಕ್ಷೆಯ ವೇಳೆ ಜನಿವಾರ, ಕೈದಾರ, ಓಲೆ ತೆಗೆಸಿ ಹಿಂದೂ ನಂಬಿಕೆಗೆ ಸರಕಾರ ಅವಮಾನ: ಬಿಜೆಪಿ ಶಾಸಕ ಭರತ್ ಶೆಟ್ಟಿ ಆಕ್ರೋಶ

ಸಿಇಟಿ ಪರೀಕ್ಷೆಯ ವೇಳೆ ಜನಿವಾರ, ಕೈದಾರ, ಓಲೆ ತೆಗೆಸಿ ಹಿಂದೂ ನಂಬಿಕೆಗೆ ಸರಕಾರ ಅವಮಾನ: ಬಿಜೆಪಿ ಶಾಸಕ ಭರತ್ ಶೆಟ್ಟಿ ಆಕ್ರೋಶ


ಸುರತ್ಕಲ್: ಕರ್ನಾಟಕ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ, ಕೈದಾರ, ಓಲೆ ಬಿಚ್ಚಿಸಿ ಹಿಂದೂ ವಿದ್ಯಾರ್ಥಿಗಳ ನಂಬಿಕೆ ಆಚರಣೆಗೆ ಅವಮಾನ ಮಾಡುವ ಸರಕಾರ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿದ್ದು ಈ ಮೂಲಕ ಸರಕಾರವೇ ಹಿಂದೂ ಸಮಾಜವನ್ನು ಕೆರಳಿಸಿ ಹೋರಾಟಕ್ಕೆ ಇಳಿಯುವಂತೆ ಪ್ರೇರೇಪಿಸುತ್ತಿದೆ ಎಂದು ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಹಿಂದೂ ಸಂಪ್ರದಾಯ ಹಾಗೂ ನಂಬಿಕೆಗಳಿಗೆ ಸಂಬಂಧಿಸಿದ ಪ್ರತೀಕಗಳನ್ನು ಕಳಚಿಸುವುದು ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತದ್ದು. ಕಳೆದ ವರ್ಷವೂ ಇದೇ ರೀತಿಯ ಘಟನೆಗಳು ನಡೆದಿದ್ದರೂ ಸರ್ಕಾರ ಯಾವುದೇ ಪಾಠ ಕಲಿತಿಲ್ಲ,” ಎಂದು ಆರೋಪಿಸಿದ್ದಾರೆ.ಪರೀಕ್ಷೆಯ ಸಂಧರ್ಭವನ್ನು ಒಂದು ವರ್ಗದ ತುಷ್ಟಿಕರಣಕ್ಕೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಸರಕಾರ “ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಪಾರದರ್ಶಕವಾಗಿ ಕಾಣುವ ಕಿವಿಯೋಲೆ, ಕರಿಮಣಿ, ಕೈದಾರಗಳನ್ನು ತೆಗೆಸುವ ಉದ್ದೇಶವೇನು? ಇದು ಸ್ಪಷ್ಟವಾಗಿ ಒಂದು ಸಮುದಾಯದ ವಿರುದ್ಧ ಭೇದಭಾವ ತೋರಿಸುವ ಕ್ರಮವಾಗಿದೆ,” ಎಂದಿದ್ದಾರೆ.

ಸರ್ಕಾರ ತಕ್ಷಣ ಈ ರೀತಿಯ ಕ್ರಮಗಳನ್ನು ನಿಲ್ಲಿಸಿ, ಎಲ್ಲಾ ವಿದ್ಯಾರ್ಥಿಗಳು ಶಾಂತಿ ಮತ್ತು ನೆಮ್ಮದಿಯಿಂದ ಪರೀಕ್ಷೆ ಬರೆಯುವಂತೆ ಸೂಕ್ತ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇಲ್ಲವಾದರೆ, ಹಿಂದೂ ಸಮುದಾಯದ ಆಕ್ರೋಶ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಈ ಘಟನೆ ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ, ಪರೀಕ್ಷಾ ನಿಯಮಗಳು ಹಾಗೂ ಸಮಾನತೆ ಕುರಿತಂತೆ ಹೊಸ ಚರ್ಚೆಗೆ ಕಾರಣವಾಗಿದ್ದು,  ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಸರಕಾರ, ಮುಖ್ಯಮಂತ್ರಿಗಳು ಹಿಂದೂಗಳ ಕ್ಷಮೆ ಯಾಚಿಸಬೇಕು  ಎಂದು  ಶಾಸಕರಾದ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article