ಮೇ 1ರಂದು ಬುದ್ಧ ಜಯಂತಿ ಆಚರಣೆಗೆ ಕರೆ
ಉಡುಪಿ: ಭಗವಾನ್ ಬುದ್ಧ ಜಯಂತಿಯನ್ನು ಜಿಲ್ಲಾ ಮಟ್ಟದಲ್ಲಿ ಮೇ 1ರಂದು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿನ ತಮ್ಮ ಕಚೇರಿಯಲ್ಲಿ ಸೋಮವಾರ ನಡೆದ ಭಗವಾನ್ ಬುದ್ಧ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಾಗೂ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ಸಂದೇಶಗಳನ್ನು ಸಮಾಜಕ್ಕೆ ತಿಳಿಸಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡಲು ಹಾಗೂ ದಾರ್ಶನಿಕರ ಆಶಯ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾಡಳಿತ ಹಾಗೂ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಸಹಯೋಗದಲ್ಲಿ ಮೇ 1ರಂದು ಭಗವಾನ್ ಬುದ್ಧ ಜಯಂತಿಯನ್ನು ನಗರದ ಬೋರ್ಡ್ ಹೈಸ್ಕೂಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಆಚರಿಸಲಾಗುವುದು ಎಂದ ಅವರು, ಕಾರ್ಯಕ್ರಮದ ಯಶಸ್ಸಿಗೆ ರೂಪುರೇಷೆ ಸಿದ್ಧಪಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಮುದಾಯದವರನ್ನು ಆಹ್ವಾನಿಸಬೇಕು. ಶಾಂತಿ, ಅಹಿಂಸೆ ಹಾಗೂ ಮಾನವೀಯತೆಯ ಸಂದೇಶ ಸಾರಿದ ಭಗವಾನ್ ಬುದ್ಧರ ಚಿಂತನೆ ಕುರಿತು ಸಂಪನ್ಮೂಲವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಬೇಕು ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಅಧ್ಯಕ್ಷರು, ಪದಾಧಿಕಾರಿಗಳು ಮೊದಲಾದವರಿದ್ದರು.