ಉಡುಪಿ-ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇಗುಲದ ಪ್ರತಿಷ್ಠಾ ವರ್ಧಂತಿ ಉತ್ಸವ ಸಂಪನ್ನ
Monday, April 20, 2026
ಉಡುಪಿ: ಇಲ್ಲಿನ ಸಂತೆಕಟ್ಟೆಯ ರಾ.ಹೆ. 66ರ ಅಂಬಾಗಿಲು ಸಮೀಪದ ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ಅಕ್ಷಯ ತೃತೀಯ ದಿನದಂದು ನಡೆಯುವ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಏ.19 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೇ.ಮೂ. ಪುತ್ತೂರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ನೆರವೇರಿತು.
ಅಂದು ಬೆಳಗ್ಗೆ ಪ್ರಾರ್ಥನೆ, ಪುಣ್ಯಾಹ, ಕಲಾ ಸಾನ್ನಿಧ್ಯಯುಕ್ತವಾಗಿ ದೇಗುಲದಲ್ಲಿ ‘ಚಂಡಿಕಾಯಾಗ’, ಶ್ರೀ ಸತ್ಯನಾರಾಯಣ ಪೂಜೆ, ಪೂರ್ಣಾಹುತಿ, ಪಲ್ಲಪೂಜೆ ಮಧ್ಯಾಹ್ನ ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿಯನ್ನು ದೇಗುಲದ ಅರ್ಚಕ ರಾಮಚಂದ್ರ ಗಾಂವಸ್ಕರ್ ಮತ್ತು ದೇವರಾಯ ಗಾಂವಸ್ಕರ್ ನಡೆಸಿಕೊಟ್ಟರು.
ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸುಮಾರು 2 ಸಾವಿರ ಮಂದಿ ಶ್ರೀ ಮಾಸ್ತಿ ಅಮ್ಮನ ಅನ್ನ ಪ್ರಸಾದ ಸ್ವೀಕರಿಸಿದರು.
ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8 ಕ್ಕೆ ಮಹಾಪೂಜೆ, ದೇವಿ ದರ್ಶನ ಸೇವೆಯು ದೇಗುಲದ ಪಾತ್ರಿಗಳಾದ ಪದ್ಮನಾಭ ಶೇಟ್ ನೆಲ್ಲಿಕಟ್ಟೆಯವರ ನೇತೃತ್ವದಲ್ಲಿ ಜರುಗಿತು. ನಂತರ ಲಘು ಉಪಹಾರ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ವಿನೋದ್ ಗಾಂವಸ್ಕರ್, ವಾಸುದೇವ ಗಾಂವಸ್ಕರ್, ಗಣೇಶ್ ಗಾಂವಸ್ಕರ್, ಶ್ರೀನಿವಾಸ್ ನಾಯಕ್, ಗಣಪತಿ ನಾಯಕ್ ಅಂಬಾಗಿಲು ಮತ್ತು ಗಾಂವಸ್ಕರ್ ಕುಟುಂಬಸ್ಥರು ಹಾಗೂ ನಂಬಿದ ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.



