ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ 2 ದಿನಗಳ ಬೃಹತ್ ‘ಉದ್ಯೋಗಂ-2026’ ಮೇಳ

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ 2 ದಿನಗಳ ಬೃಹತ್ ‘ಉದ್ಯೋಗಂ-2026’ ಮೇಳ


ಉಜಿರೆ: ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಎಸ್‌ಡಿಎಂ ಸ್ವಾಯತ್ತ ಕಾಲೇಜು, ಎಸ್‌ಡಿಎಂ ಎಂಜಿನೀಯರಿಂಗ್ ಕಾಲೇಜು ಹಾಗೂ  ಎಸ್‌ಡಿಎಂ ಪೊಲಿಟೆಕ್ನಿಕ್ ಕಾಲೇಜುಗಳ ಸಹಯೋಗದೊಂದಿಗೆ 2 ದಿನಗಳ ಬೃಹತ್ ‘ಎಸ್‌ಡಿಎಂ ಉದ್ಯೋಗಂ-2026’ ಮೇಳಕ್ಕೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಏ.6 ರಂದು ಕಾಲೇಜು ಆವರಣದಲ್ಲಿ ಬಲೂನು ಹಾರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಎಷ್ಟೇ ಪ್ರತಿಭೆ, ಸಾಮರ್ಥ್ಯವಿದ್ದರೂ ಸೂಕ್ತ ಉದ್ಯೋಗದ ಸವಾಲು ಎದುರಿಸಬೇಕಾಗುತ್ತದೆ. ಉಜಿರೆಯ ಎಸ್‌ಡಿಎಂ ಕಾಲೇಜು ಮತ್ತು ಸುತ್ತುಮುತ್ತಲಿನ ಕಾಲೇಜುಗಳ, ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳು ಉದ್ಯೋಗದಲ್ಲಿ ಅವಕಾಶದಿಂದ  ವಂಚಿತರಾಗಬಾರದೆಂದು ಇಲ್ಲಿ ಪ್ರಥಮ ಬಾರಿಗೆ ಉದ್ಯೋಗಮೇಳ ಆಯೋಜಿಸಲಾಗಿದೆ. ಇದರಲ್ಲಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆಯುವ ಮೂಲಕ  ಸಫಲರಾಗಲಿ. ಉದ್ಯೋಗ ಮೇಳ ಆಯೋಜಿಸಿದ ಸಂಘಟಕರಿಗೆ ಅಭಿನಂದನೆಗಳು ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಅಗ್ರಿಲೀಫ್ ಸಂಸ್ಥೆಯ ಸ್ಥಾಪಕ, ಸಿಇಓ ಅವಿನಾಶ್ ರಾವ್ ಮಾತನಾಡಿ, ಕಳೆದ 3 ವರ್ಷದಲ್ಲಿ ಅಗ್ರಿಲೀಫ್ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಉದ್ಯೋಗಿಗಳ ಪರಿಶ್ರಮವೇ ಕಾರಣವಾಗಿದೆ. ನಮ್ಮನ್ನು ನಾವು ಬೆಳೆಸಿಕೊಳ್ಳುವುದರ ಮೂಲಕ ಉದ್ಯೋಗದಲ್ಲಿ ನೈಪುಣ್ಯತೆ ಪಡೆಯಬಹುದು. ವಿದ್ಯಾರ್ಥಿಗಳಿಗೆ ಹೆತ್ತವರು ಅರ್ಧ ಜವಾಬ್ದಾರಿಯಾದರೆ, ಅವರಿಗೆ ಜ್ಞಾನ ನೀಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಯದ್ದು. ವಿದ್ಯಾರ್ಥಿಗಳು ದೃಢ ವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ ಗೊತ್ತಿದ್ದನ್ನು  ಗೊತ್ತಿದ್ದ ಹಾಗೆ ಹೇಳಿ ಸಮಚಿತ್ತದಿಂದ ಉತ್ತರಿಸಿ ಯಶಸ್ವಿಯಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ ಎಂದು ಶುಭ ಹಾರೈಸಿದರು.

ಎಸ್‌ಡಿಎಂ ಕಾಲೇಜು ಪ್ರಾಚಾರ್ಯ ಪ್ರೊ. ವಿಶ್ವನಾಥ್ ಪಿ., ಆಡಳಿತ ಸಂಯೋಜಕ ಪ್ರೊ. ಎಸ್.ಎನ್. ಕಾಕತ್ಕರ್, ಉದ್ಯೋಗ ಮೇಳ ಸಂಯೋಜಕರಾದ ಡಾ. ಅಶೋಕ ಕುಮಾರ್, ಡಾ. ಸುಬ್ರಹ್ಮಣ್ಯ ತೊಲ್ಪಾಡಿತ್ತಾಯ, ಸಂತೋಷ್, ಡಾ. ನಾಗರಾಜ ಪೂಜಾರಿ, ಅಮರೇಶ್ ಹೆಬ್ಬಾರ್ ಉಪಸ್ಥಿತರಿದ್ದರು.

ಡಾ. ಮಹೇಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 2 ದಿನಗಳ ಉದ್ಯೋಗ ಮೇಳದಲ್ಲಿ 110ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು,  ರಾಜ್ಯಾದ್ಯಂತದಿಂದ 4000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article