ವಿದ್ಯಾರ್ಥಿಗಳಲ್ಲಿ ಕುತೂಹಲದ ಪ್ರಶ್ನೆಗಳು ಉದ್ಭವಿಸಲಿ: ಸಂದೀಪ್ ಎಸ್.ಪಿ.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಪ್ರತಿ ಹಂತದಲ್ಲೂ ಕುತೂಹಲದ ಪ್ರಶ್ನೆಗಳು ಉದ್ಭವಿಸಿದರೆ ನಮ್ಮನ್ನು ಬೌದ್ಧಿಕವಾಗಿ ಸಮರ್ಥರನ್ನಾಗಿಸುತ್ತದೆ. ಅದರಿಂದ ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಇರುವ ಹುದ್ದೆಯ ಕಾರ್ಯವನ್ನು ಎಷ್ಟು ಕ್ರಿಯಾತ್ಮಕವಾಗಿ ಮತ್ತು ಸರಳವಾಗಿ ನಿರ್ವಹಿಸಬಲ್ಲೆವು ಎಂಬುದರಲ್ಲಿ ನಮ್ಮ ಜಾಣ್ಮೆ ಗುರುತಿಸಬಹುದು. ಅವಕಾಶಗಳ ಸದುಪಯೋಗ ಹೊಸ ಅನುಭವ ನೀಡುವ ಜೊತೆಗೆ ಮತ್ತಷ್ಟು ಹೊಸ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಎಂದು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎನ್. ಶಶಿಶೇಖರ್ ಕಾಕತ್ಕರ್ ಮಾತನಾಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ತಮ್ಮ ಉದ್ಯೋಗದ ಬದುಕಿನಲ್ಲಿ ನಾಗರಿಕ ಪ್ರಜ್ಞೆಯನ್ನು ಮರೆಯದೆ ಶಿಸ್ತು ಮತ್ತು ಸುಸಂಸ್ಕೃತರಾಗಿ ಬದುಕಬೇಕು. ನಕಾರಾತ್ಮಕ ಚಿಂತನೆಗಳಿಗೆ ವಶವಾಗದೆ ಸಕಾರಾತ್ಮಕ ಯೋಚನೆಯಿಂದ ಯಶಸ್ಸಿನೆಡೆಗೆ ಸಾಗಬೇಕು ಎಂದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸಾಧನೆ, ಪಠ್ಯೇತರ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಶೈಕ್ಷಣಿಕ ಭೇಟಿ, ಕ್ಯಾಂಪಸ್ ನೇಮಕಾತಿ ಸೇರಿದಂತೆ ವಾರ್ಷಿಕ ಶೈಕ್ಷಣಿಕ ವರದಿ ವಾಚಿಸಿದರು.
ಶೈಕ್ಷಣಿಕ ವರ್ಷದಲ್ಲಿ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ಉಪನ್ಯಾಸಕ ಪ್ರವೀಣ್ ಬಿ.ಜಿ. ಪ್ರಶಸ್ತಿ ವಿಜೇತರ ವರದಿ ವಾಚಿಸಿದರು.
ಮುಖ್ಯಅತಿಥಿ ಸಂದೀಪ್ ಎಸ್.ಪಿ. ಅವರನ್ನು ಕಾಲೇಜಿನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಂಕರ್ ಭಟ್ ಎಚ್.ಆರ್. ಸ್ವಾಗತಿಸಿ, ಉಪನ್ಯಾಸಕ ಸಂಪತ್ ಕುಮಾರ್ ನಿರೂಪಿಸಿ, ರೆನಿಟಾ ಫೆರ್ನಾಂಡಿಸ್ ವಂದಿಸಿದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.