ಆಟೋ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏ. 13ರಂದು ಬೃಹತ್ ಪ್ರತಿಭಟನೆ
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾದ್ಯಂತ ಏಕರೂಪದ ಸಂಚಾರ ಪರವಾನಗಿ ಹಾಗೂ ದರ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿ ಈ ಪ್ರತಿಭಟನೆ ನಡೆಯಲಿದ್ದು ಈ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಟೋ ಚಾಲಕರು ಭಾಗವಹಿಸಲಿದ್ದಾರೆ. ಸರ್ಕಾರ ತಕ್ಷಣವೇ ಆಟೋ ಚಾಲಕರ ಸಮಸ್ಯೆಗಳತ್ತ ಗಮನ ಹರಿಸಬೇಕು. ಒಂದು ಜಿಲ್ಲೆ–ಒಂದು ಪರವಾನಗಿ ಜಾರಿಗೊಳಿಸಿ ಜಿಲ್ಲಾದ್ಯಂತ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂದರು.
ನಗರ ವ್ಯಾಪ್ತಿಯಲ್ಲಿ ಗ್ರಾಮಾಂತರ ಭಾಗದ ಆಟೋಗಳಿಗೆ ದುಡಿಯಲು ಅವಕಾಶ ನೀಡುವುದು ಬೇಡ, ಗ್ರಾಮಾಂತರ ಭಾಗದ ಆಟೋಗಳು ನಗರಕ್ಕೆ ಬಂದು ದುಡಿದರೆ ನಿಯಮಾನುಸಾರ ದಂಡ ವಿಧಿಸಲಿ. ಆದರೆ ನಮ್ಮ ಮನೆಯವರನ್ನು ನಮ್ಮ ಆಟೋದಲ್ಲಿ ಕರೆದುಕೊಂಡು ಹೋದರೆ ಅಥವಾ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರು ಆಟೋವನ್ನು ತಡೆ ಹಿಡಿದು 10ಸಾವಿರ ರೂ. ಗಳಷ್ಟು ದಂಡ ವಿಧಿಸುವುದು ನ್ಯಾಯಸಮ್ಮತವೇ ಎಂದು ಪ್ರಶ್ನಿಸಿದರು.
ಗ್ರಾಮಾಂತರ ಪಾಸ್ ಹೊಂದಿರುವ ವಾಹನಗಳಿಗೆ ಅಪಘಾತವಾದರೆ ಇನ್ಸುರನ್ಸ್ ಸಮಸ್ಯೆ ಉಂಟಾಗಬಹುದು. ನಾವು ನಿಯಮಿತವಾಗಿ ತೆರಿಗೆ ಕಟ್ಟುತ್ತಿದ್ದೇವೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಎಸ್.ಪಿ. ಅವರಿಗೆ ನೇರವಾಗಿ ಮನವಿ ಸಲ್ಲಿಸಿದ್ದೇವೆ. ನಮ್ಮ ಸಮಸ್ಯೆಗೆ ಅವರು ಸ್ಪಂದಿಸುವರೆಂಬ ವಿಶ್ವಾಸ ನಮ್ಮದಲ್ಲಿದೆ. ಗ್ಯಾಸ್ ಭರ್ತಿ ಮಾಡುವ ವಿಚಾರದಲ್ಲಿಯೂ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವು ಗ್ಯಾಸ್ ಪಂಪ್‌ಗಳಲ್ಲಿ ಗ್ಯಾಸ್ ಇದೆ ಆದರೆ ಕೆಲ ಆಟೋಗಳಿಗೆ ನೀಡಲಾಗುತ್ತಿಲ್ಲ ಎಂಬ ಆರೋಪ ಇದೆ. ಪಂಪ್ ಮಾಲೀಕರು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ನಡೆದುಕೊಳ್ಳ ಬಾರದು ಎಂದರು.
ಆಟೋ ರಾಜಾಕನ್ಮಾರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಬೋಳಿಯಾರ್ ಮಾತನಾಡಿದರು.
ಹೋರಾಟ ಸಮಿತಿ ಸಂಚಾಲಕ ಸಿದ್ದೀಕ್ ಕೊಡಕ್ಕಲ್, ಕರಾವಳಿ ಆಟೋ ಪಾರ್ಕ್ ಮುಡಿಪು ಅಧ್ಯಕ್ಷ ಹರೀಶ್ ಗಿಂಡೆಪೇರ್, ಆಟೋ ರಾಜಾಕನ್ಮಾರ್ ಯೂನಿಯನ್ ಉಪಾಧ್ಯಕ್ಷ ಮನ್ಸೂರ್ ಮಲಾರ್, ಜೊತೆ ಕಾರ್ಯದರ್ಶಿ ಶಖೀಕ್ ಸಾಲೆತ್ತೂರು, ಸದಸ್ಯರಾದ ಶರೀಫ್ ಮಂಚಿ, ನಿಸಾರ್ ದೇರಳಕಟ್ಟೆ, ತಹ್ಸೀನ್ ತೊಕ್ಕೊಟ್ಟು, ಇಮ್ರಾನ್ ಉಳ್ಳಾಲ, ರಿಜ್ವಾನ್ ಕಣಚೂರ್ ಹಾಗೂ ಉಸ್ಮಾನ್ ಸಜಿಪ ಉಪಸ್ಥಿತರಿದ್ದರು.