ಗುತ್ತು ಬರಿಕೆಗಳಿಂದ ಕರಾವಳಿಯಲ್ಲಿ ದೈವಾರಾಧನೆಯ ಅಸ್ಥಿತ್ವ ಉಳಿಯಲು ಸಾಧ್ಯವಾಗಿದೆ: ಕೃಷ್ಣ ಅಡಿಗ

ಗುತ್ತು ಬರಿಕೆಗಳಿಂದ ಕರಾವಳಿಯಲ್ಲಿ ದೈವಾರಾಧನೆಯ ಅಸ್ಥಿತ್ವ ಉಳಿಯಲು ಸಾಧ್ಯವಾಗಿದೆ: ಕೃಷ್ಣ ಅಡಿಗ


ಉಳ್ಳಾಲ: ಮನೆಯ ಹೊಸ್ತಿಲ ಒಳಗಷ್ಟೆ ನಾವು ನಮ್ಮ ಜಾತಿಗೆ ಸೀಮಿತರಾಗಿ,ಹೊಸ್ತಿಲು ದಾಟಿ ಹೊರಬಂದಾಗ ಭಾರತೀಯರಾಗಿ ಎಲ್ಲರೊಂದಿಗೂ ಬೆರೆಯಬೇಕು.ಗುತ್ತು ಬರಿಕೆಗಳ ಯಜಮಾನರಲ್ಲಿ ಎಲ್ಲವನ್ನೂ ಮುಂದುವರಿಸಿ ಕೊಂಡೊಯ್ಯುವ ನಾಯಕತ್ವದ ಗುಣಗಳಿರುವ ಕಾರಣ ಕರಾವಳಿಯಲ್ಲಿ ಇಂದಿಗೂ ದೈವಾರಾಧನೆಗಳು ಉಳಿಯಲು ಸಾಧ್ಯವಾಗಿದೆ. ಕಾಯ ಬಿಟ್ಟು ಮಾಯವಾಗಿ ದೈವತ್ವವನ್ನು ಪಡೆದ ಕೊರಗಜ್ಜನಿಗೆ ಯಾವುದೇ ಜಾತಿಯ ಪರಿದಿಯಿಲ್ಲವೆಂದು ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣ ಅಡಿಗ ಹೇಳಿದರು.

ವಿಶ್ವ ಹಿಂದೂ ಪರಿಷತ್ ಉಳ್ಳಾಲ ಪ್ರಖಂಡ ವತಿಯಿಂದ ಹಿಂದೂ ಸಮಾಜದ ಐಕ್ಯತೆ ಮತ್ತು ಲೋಕ ಕಲ್ಯಾಣಾರ್ಥವಾಗಿ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ಭಾನುವಾರದಂದು ನಡೆದ ೬ನೇ ವರ್ಷದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಬೃಹತ್ ಪಾದಯಾತ್ರೆಯ ಪ್ರಯುಕ್ತ ಕೊರಗಜ್ಜನ ಕ್ಷೇತ್ರದ ಬಳಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಧಾರ್ಮಿಕ ಉಪನ್ಯಾಸಗೈದರು.

ದೈವ, ದೇವರುಗಳಿಗೆ ನಮ್ಮಲ್ಲಿ ಇದ್ದುದನ್ನಷ್ಟೇ ಭಕ್ತಿಯಿಂದ ಸಮರ್ಪಸಿದರೆ ಸಾಕು. ಸಾಲ ಮಾಡಿ ವಿಜೃಂಭಣೆ, ಆಡಂಭರಗಳ ಉತ್ಸವ, ಆಚರಣೆಗಳು ಅನಗತ್ಯ. ಕೊಡು ಕೊಳ್ಳುವಿಕೆಯನ್ನು ಜೀವನದಲ್ಲಿ ಅನುಸರಿಸಿದರೆ ನಮ್ಮ ಬದುಕು ಸಾಕಾರಗೊಳ್ಳಲು ಸಾಧ್ಯ. ವಿವಿಧ ಸ್ಥರದ ಕುಲ ಕಸುಬನ್ನು ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಪ್ರತೀ ಜಾತಿ ವರ್ಗದವರೂ ಶ್ರೇಷ್ಟರೇ ಆಗಿದ್ದಾರೆ. ಅತ್ಯಂತ ಕಷ್ಟಪಟ್ಟು ಕೆಲಸ ನಿರ್ವಹಿಸುವ ಪೌರಕಾರ್ಮಿಕರು ಮತ್ತು ನರ್ಸ್ ಗಳನ್ನ ಗುರುತಿಸಿ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನ ಕೊಡುವಂತಾಗಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವೆಂದರು.

ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ, ನಮ್ಮ ರಾಜ್ಯದಲ್ಲೇ ಕೆಲವು ಜಾತಿ ವರ್ಗದವರಿಗೆ ಈಗಲೂ ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಈ ಧೋರಣೆಯ ವಿರುದ್ಧ ವಿಶ್ವ ಹಿಂದೂ ಪರಿಷತ್ ನಿರಂತರ ಹೋರಾಟ ನಡೆಸಿ ಸಮಾನತೆಯನ್ನ ಸಾರುವ ಕೆಲಸ ನಡೆಸುತ್ತಿದೆ. ಹಿಂದೂ ಯುವಕ, ಯುವತಿಯರು ಪರಸ್ಪರ ಪ್ರೀತಿಸಿದರೆ ಜಾತಿ ಹೆಸರಲ್ಲಿ ಮರ್ಯಾದ ಹತ್ಯೆಗಳನ್ನು ನಡೆಸುತ್ತಿದ್ದಾರೆ. ನಮ್ಮ ಹಿಂದೂ ಯುವತಿಯರನ್ನ ಅನ್ಯ ಮತೀಯರು ಪ್ರೀತಿಸುವ ನಾಟಕ ಮಾಡಿ ಲವ್ ಜಿಹಾದ್ ನಡೆಸಿದರೂ ನಾವು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ಹಿಂದೂ ಸಮಾಜದ ಐಕ್ಯತೆಗಾಗಿ ಕೊರಗಜ್ಜನ ಕ್ಷೇತ್ರಕ್ಕೆ ಆರಂಭಿಸಲಾದ ಈ ಪಾದಾಯಾತ್ರೆಗೆ ಇವತ್ತು ನಾವು ಯಾರನ್ನೂ ಕರೆಯಬೇಕೆಂಬ ಅವಶ್ಯಕತೆಯಿಲ್ಲ, ಬದಲಾಗಿ ಕೊರಗಜ್ಜನ ಭಕ್ತರೇ ಸಾವಿರಾರು ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆಯೆಂದರು.

ವಿಶ್ವ ಹಿಂದೂ ಪರಿಷತ್ ಉಳ್ಳಾಲ ನಗರ ಪ್ರಖಂಡದ ಅಧ್ಯಕ್ಷರಾದ ನಾರಾಯಣ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಕೆ. ಜಯರಾಮ ಶೆಟ್ಟಿ, ಪ್ರಮುಖರಾದ ಬೊಲ್ಯಗುತ್ತು ವಿನೋದ್ ಶೆಟ್ಟಿ, ರತ್ನಾಕರ ಕಾವ ಕುತ್ತಾರುಗುತ್ತು, ದೇವಿ ಪ್ರಸಾದ್ ಶೆಟ್ಟಿ ಮಾಗಣತ್ತಡಿ, ವಿಹಿಂಪ ಸಹ ಸೇವಾ ಪ್ರಮುಖರಾದ ಗೋಪಾಲ ಕುತ್ತಾರು, ವಿಹಿಂಪ ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕರಾದ ಬುಜಂಗ ಕುಲಾಲ್,ವಿಹಿಂಪ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.

ನಮ್ಮ ನಡೆ ಆಯೋಜನಾ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಕುತ್ತಾರ್ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.ಆಶಿಕ್ ಗೋಪಾಲಕೃಷ್ಣ ನಿರೂಪಿಸಿ, ಪ್ರವೀಣ್ ಬಸ್ತಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article