ತುಳು ಆಸ್ಮಿತೆಯ ಮಕ್ಕಳ ಶಿಬಿರದಿಂದ ವಿಶಿಷ್ಟ ಅನುಭವ: ಮೈಮ್ ರಾಮದಾಸ್
ಮಂಗಳೂರಿನ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ಒಂದು ವಾರಗಳ ಅವಧಿಯ ‘ತೆಲಿಕೆ-ನಲಿಕೆ’ ಮಕ್ಕಳ ಬೇಸಿಗೆ ಶಿಬಿರವನ್ನು ಸೋಮವಾರ ದಂದು ಮಕ್ಕಳ ಜೊತೆಗೆ ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಬೇಸಿಗೆ ಶಿಬಿರವು ಆನಂದಮಯ ಹಾಗೂ ಉಲ್ಲಾಸದಾಯಕವಾಗಿರಬೇಕು, ಅದು ಮತ್ತೊಂದು ತರಗತಿ ಕೊಠಡಿಯಾಗಬಾರದು ಎಂದು ಮೈಮ್ ರಾಮದಾಸ್ ಅವರು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳುನಾಡಿನ ಸೊಗಡಿನ ಕಲೆ, ಕಥೆ, ಆಟ ಕೂಟಗಳನ್ನು ಪರಿಚಯಿಸುವ ಈ ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ಯುವ ಕಲಾವಿದರು, ತರಬೇತುದಾರರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳಾಗಿ ಭಾವಗಹಿಸಿ ತುಳು ಮಣ್ಣಿನ ಕಂಪನ್ನು ಮಕ್ಕಳ ನಡುವೆ ಪಸರಿಸಲಿರುವರು ಎಂದು ಹೇಳಿದರು.
ಶಿಬಿರದಲ್ಲಿ 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಶಿಬಿರದ ಸಹ ನಿರ್ದೇಶಕ, ರಂಗ ಕಲಾವಿದ ವಿನೋದ್ ಶೆಟ್ಟಿ, ಕೊರಲ್ ಕಲಾ ತಂಡದ ಕಲಾವಿದ ರಮೇಶ್ ಮಂಚಕಲ್ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯೆ ಸಂಚಾಲಕಿ ಅಕ್ಷಯ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.