ಶಿಕ್ಷಕರೊಂದಿಗೆ ಈಜಲು ತೆರಳಿದ್ದ ವಿಟ್ಲದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು
ವಿಟ್ಲ: ಶಿಕ್ಷಕರ ಜೊತೆ ಈಜಲು ಹೋಗಿದ್ದ ವಿಟ್ಲದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕಾಶಿಮಠ ನಿವಾಸಿ ಗೋವರ್ಧನ್ ನಾಯಕ್ ಅವರ ಪುತ್ರ ಅನಿಕೇತ್ (14) ಮೃತ ವಿದ್ಯಾರ್ಥಿ.
ಘಟನೆಯ ವಿವರ: ಜಯಪುರದ ಗುರುಕುಲ ಮಾದರಿಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನಿಕೇತ್, ರವಿವಾರ ಮಧ್ಯಾಹ್ನ ಶಿಕ್ಷಕರೊಂದಿಗೆ ಈಜುಕೊಳಕ್ಕೆ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಈಜಾಡುತ್ತಿದ್ದ ವೇಳೆ ಅನಿಕೇತ್ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದನು. ತಕ್ಷಣವೇ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ಈಗಾಗಲೇ ನಡೆಸಲಾಗಿದ್ದು, ರವಿವಾರ ರಾತ್ರಿಯೇ ಜಯಪುರದಿಂದ ವಿಟ್ಲಕ್ಕೆ ಮೃತದೇಹ ತಂದು ಸೋಮವಾರ ಬೆಳಗ್ಗೆ ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ಮೃತ ವಿದ್ಯಾರ್ಥಿಯ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಖಚಿತ ಮೂಲಗಳು ತಿಳಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.