ರಸ್ತೆ ಅಪಘಾತಕ್ಕೆ ಯುವಕ ಬಲಿ: ಇನ್ನೋರ್ವ ಗಂಭೀರ
ಬಂಟ್ವಾಳ: ಅಪರಿಚಿತ ವಾಹನ ಢಿಕ್ಕಿಯಾಗಿ ಬೈಕ್ ಸವಾರನೋರ್ವ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟರೆ, ಸಹಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾ.ಹೆ.ಯ ಕಡೆಗೋಳಿ ಎಂಬಲ್ಲಿ ಬುಧವಾರ ಮುಂಜಾನೆಯ ವೇಳೆ ನಡೆದಿದೆ.
ಮೃತ ಬೈಕ್ ಸವಾರನನ್ನು ಬಜಪೆ ಕೈಕಂಬ ನಿವಾಸಿ ಅಭಿಜಿತ್ (28) ಎಂದು ಗುರುತಿಸಲಾಗಿದ್ದು, ಸಹಸವಾರನಾಗಿದ್ದ ಸಂದೀಪ್ ಗಂಭೀರ ಗಾಯಗೊಂಡು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಅಭಿಜಿತ್ ಮತ್ತು ಗಾಯಾಳು ಸಂದೀಪ್ ಸ್ನೇಹಿತರಾಗಿದ್ದು, ಸಂದೀಪ್‌ನನ್ನು ಬೈಕಿನಲ್ಲಿ ಬಂಟ್ವಾಳ ಸಮೀಪದ ಅಮ್ಟಾಡಿ ಮನೆಗೆ ಬಿಟ್ಟು ಬರಲು ಹೋಗುತ್ತಿದ್ದ ವೇಳೆ, ಮುಂಜಾನೆ ಸುಮಾರು 3 ಗಂಟೆ ಹೊತ್ತಿಗೆ ಕಡೆಗೋಳಿ ಸಮೀಪ ಅಪರಿಚಿತ ವಾಹನ ಹಿಂಬದಿಯಿಂದ ಢಿಕ್ಕಿ ಹೊಡೆದು ಬಳಿಕ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದೆ.
ಪರಿಣಾಮ ಬೈಕ್ ರಸ್ತೆಗೆ ಪಲ್ಟಿಯಾಗಿದ್ದು ಅಭಿಜಿತ್ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದರೆ, ಬಸ್‌ವೊಂದರ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಅತನ ಸ್ನೇಹಿತ ಸಂದೀಪ್ ಗಂಭೀರ ಸ್ವರೂಪದ ಗಾಯಗೊಂಡಿದ್ದು ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ಟ್ರಾಫಿಕ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
ಉದ್ಯೋಗಕ್ಕೆ ಸೇರಬೇಕಾದಾತ ವಿಧಿಯ ಅಟ್ಟಹಾಸಕ್ಕೆ ಬಲಿಯಾದ:
ಅಭಿಜಿತ್ ಅವರು ಇವರಿಗೆ ಎಂ.ಆರ್.ಪಿ.ಎಲ್.ಸಂಸ್ಥೆಯಲ್ಲಿ ಉದ್ಯೋಗ ದೊರಕಿದ್ದು, ಮೇ.27 ರಂದು ಮಂಗಳೂರಿನಲ್ಲಿರುವ ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಹಾಜರಾಗಬೇಕಾಗಿತ್ತು. ಆದರೆ ವಿಧಿಯಾಟ ಬೇರೇನೆ ಆಗಿದ್ದು, ಹೊಸ ಉದ್ಯೋಗಕ್ಕೆ ಸೇರಿ ಭವಿಷ್ಯದ ಕನಸು ಕಂಡಿದ್ದ ಅಭಿಜಿತ್ ವಿಧಿಯಾಟಕ್ಕೆ ಬಲಿಯಾಗಿದ್ದಾನೆ. ಉದ್ಯೋಗಕ್ಕೆ ಸೇರುವ ಮುನ್ನವೇ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದು ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ.