ನೇತ್ರಾವತಿಯಲ್ಲಿ ರಿಕ್ಷಾ ಚಾಲಕನ ಶವಪತ್ತೆ, ಕೊಲೆಶಂಕೆ
Friday, May 22, 2026
ಬಂಟ್ವಾಳ: ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿ, ರಿಕ್ಷಾಚಾಲಕನ ಮೃತದೇಹ ನೇತ್ರಾವತಿ ನದಿಯಲ್ಲಿ ಅನುಮಾನಾಸ್ಪದವಾಗಿ ಗುರುವಾರ ಸಂಜೆ ಪತ್ತೆಯಾಗಿದ್ದು, ಸ್ಥಳೀಯವಾಗಿ ಕೊಲೆ ಶಂಕೆ ವ್ಯಕ್ತವಾಗಿದೆ.
ಗೂಡಿನ ಬಳಿ ನಿವಾಸಿ ಇರ್ಪಾನ್ ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹವನ್ನು ಇರಿಸಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜನರು ಜಮಾಯಿಸಿದ್ದಾರೆ.
ಇರ್ಪಾನ್ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇದೀಗ ಊರಿನಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದಾರೆನ್ನಲಾಗಿದೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಇರ್ಪಾನ್ ಶವ ಗುರುವಾರ ಸಂಜೆ ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇವರು ನುರಿತ ಈಜುಗಾರನಾಗಿರುವುದರಿಂದ ನೀರಿನಲ್ಲಿ ಶವ ಪತ್ತೆಯಾಗಿರುವುದು ಸಂಶಯಕ್ಕೆಡೆಮಾಡಿದೆ. ಹಾಗಾಗಿ ಸ್ಥಳೀಯರು ಹಾಗೂ ಮನೆಮಂದಿ ಕೊಲೆಶಂಕೆ ವ್ಯಕ್ತಪಡಿಸಿದ್ದು, ತನಿಖೆಗೆ ಪೊಲೀಸರನ್ನು ಆಗ್ರಹಿಸಿದ್ದಾರೆ.