ತೈಲ ಮಿತ ಬಳಕೆ: ಪ್ರಧಾನಿ ಮೋದಿ ಮಾತನ್ನು ಪಾಲಿಸೋಣ
ಬಂಟ್ವಾಳ: ಮಧ್ಯಪ್ರಾಚ್ಯದಲ್ಲಾದ ಯುದ್ದದ ಪರಿಣಾಮದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೆ ಏರಿಕೆಯಾಗಿದ್ದು ಪ್ರಪಂಚದಾದ್ಯಂತ ತೈಲದ ಅಭಾವವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬಹುತೇಕ ದೇಶಗಳಲ್ಲಿ ತೈಲ ಬಿಕ್ಕಟ್ಟು ಈಗಾಗಲೇ ಕಾಡತೊಡಗಿದೆ. ನಮ್ಮ ದೇಶದಲ್ಲಿ ಮುಂದೆ ತಲೆದೋರಬಹುದಾದ ತೈಲ ಸಮಸ್ಯೆ ಬಿಕ್ಕಟ್ಟಿನಿಂದ ಪಾರಾಗಲು ರಾಷ್ಟ್ರದ ಜನತೆಯ ಹಿತದೃಷ್ಟಿಯಿಂದ ಮತ್ತು ಒಟ್ಟು ನಾಗರಿಕ ಸಮಾಜದ ಜನ ಜೀವನದ ಅನುಕೂಲತೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸಮಸ್ತ ಜನರಿಗೆ ತೈಲ ಮಿತ ಬಳಕೆಯ ಬಗ್ಗೆ ನೀಡಿದ ಕರೆಯೊಲೆಯಂತೆ ನಮ್ಮ, ನಮ್ಮ ಸ್ವಂತ ವಾಹನಗಳಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡುವ ಮೂಲಕ ಅಗತ್ಯದ ಕೆಲಸ ಕಾರ್ಯಗಳಿಗೆ ಸಾರ್ವಜನಿಕ ಬಸ್ಸು ಮತ್ತು ರೈಲ್ವೆ ಸೇವೆಯನ್ನು ಬಳಸಿಕೊಂಡು ರಾಷ್ಟ್ರಕ್ಕಾಗಿ ಅಳಿಲ ಸೇವೆಯನ್ನು ಸಲ್ಲಿಸುವುದು ಅನಿವಾರ್ಯವಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರು ತೈಲ ಮಿತ ಬಳಕೆ ಹಾಗೂ ಚಿನ್ನ ಖರೀದಿ ಕಡಿಮೆ ಮಾಡುವ ಬಗ್ಗೆ ದೇಶದ ಜನರಲ್ಲಿ ವಿನಂತಿಸಿಕೊಂಡಿದ್ದಾರೆ ವಿನಾ ಯಾವುದೇ ಒತ್ತಾಯ, ಒತ್ತಡ ಮಾಡಿರುವುದಿಲ್ಲ. ಪ್ರಧಾನಿ ಕರೆಯಂತೆ ಈಗಾಗಲೇ ದೇಶದಾದ್ಯಂತ ಹಲವು ಮಂದಿ ಉನ್ನತ ಮಟ್ಟದ ನಾಯಕರಿಂದ ಹಿಡಿದು ಅಧಿಕಾರಿಗಳು ತೈಲ ಅಭಾವವನ್ನು ತಗ್ಗಿಸುವ ಸಲುವಾಗಿ ತಮ್ಮ ಸರಕಾರಿ ವಾಹನಗಳನ್ನು ಬಿಟ್ಟು ಮಹಾನ್ ತ್ಯಾಗಕ್ಕೆ ಇಳಿದಿರಿವುದು ರಾಷ್ಟ್ರ ಮತ್ತು ಪ್ರಧಾನಿ ಮೇಲೆ ಇರುವ ಅಭಿಮಾನವೇ ಇದಕ್ಕೆ ಸಾಕ್ಷಿಯಾಗಿದೆ ಎಂದ ಅವರು ತಿಳಿಸಿದ್ದಾರೆ.
ಈ ಹಿಂದೆ ಹಲವಾರು ಬಾರಿ ರಾಜ್ಯ ಸರಕಾರಗಳು, ಕೆಲವು ಸಂಘ, ಸಂಸ್ಥೆಗಳು ನಮ್ಮಲ್ಲೇ ದೊರೆಯುವ ನೀರು ಮತ್ತು ವಿದ್ಯುತ್ ಅಭಾವ ತಪ್ಪಿಸುವ ಸಲುವಾಗಿ ಮಿತ ಬಳಕೆಯ ಬಗ್ಗೆ ಪ್ರಕಟಣೆ ಹೊರಡಿಸಿದ್ದು ನಮ್ಮೆಲ್ಲರ ಕಣ್ಣಮುಂದಿದ್ದು, ಮುಂದಿನ ದಿನಗಳಲ್ಲಿ ತುಳುನಾಡ ಜಿಲ್ಲೆಯ ಜನತೆ ಮೋದಿಯವರ ಈ ರಾಷ್ಟ್ರ ಮತ್ತು ಜನಹಿತದ ಕೋರಿಕೆಯನ್ನು ಪಾಲಿಸೋಣ ಎಂದೂ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.