ಆಟೋ ರಿಕ್ಷಾದಲ್ಲಿ ಪಡಿತರ ಅಕ್ಕಿ ಅಕ್ರಮ ದಾಸ್ತಾನು: ಅಧಿಕಾರಿಗಳಿಂದ ದಾಳಿ, ಸೊತ್ತು ವಶ
Sunday, May 10, 2026
ಬಂಟ್ವಾಳ: ಆಟೋ ರಿಕ್ಷಾವೊಂದರಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇಡಲಾಗಿದೆ ಎಂಬ ಮಾಹಿತಿ ಪಡೆದು ಆಹಾರ ಇಲಾಖೆ ಅಧಿಕಾರಿಗಳು ಮತ್ತು ವಿಟ್ಲ ಪೊಲೀಸರು ದಾಳಿ ಮಾಡಿ, ವಶಪಡಿಸಿಕೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಶಿವಾಜಿನಗರದಲ್ಲಿ ಮೇ. 10ರಂದು ಸಂಭವಿಸಿದೆ.
ದಾಳಿ ಮಾಡಿದಾಗ ಮನೆಯೊಂದರ ಅಂಗಳದಲ್ಲಿ ಆಟೋರಿಕ್ಷಾದಲ್ಲಿ 15 ಚೀಲ ಪಡಿತರ ಅಕ್ಕಿಯನ್ನು ತುಂಬಿಸಿಟ್ಟಿರುವುದು ಕಂಡುಬಂದಿದೆ.
ಸ್ಥಳದಲ್ಲಿದ್ದ ಆರೋಪಿ ವಿಟ್ಲ ಕಸಬಾ ಗ್ರಾಮದ ನಿವಾಸಿ ಅಲಿ ಅಕ್ಬರ್ (40) ತಾನೇ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ.
15 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 679.38 ಕೆಜಿ ತೂಕದ ಪಡಿತರ ಅಕ್ಕಿ (ಅಂದಾಜು ಮೌಲ್ಯ 23,098), ಇತರ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನಪಡಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅವಶ್ಯಕ ವಸ್ತುಗಳ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.