ಕರಾವಳಿ ಜಿಲ್ಲೆಯಲ್ಲಿ ಬೆಳೆಯುತ್ತಿದೆ ಬ್ಯಾರಿ ಭಾಷೆಯ ಸಾಹಿತ್ಯಲೋಕ
ಕನ್ನಡದ ಜತೆಯಲ್ಲಿ ತುಳು ಪ್ರಧಾನ ಭಾಷೆಯಾಗಿದ್ದು, ಬ್ಯಾರಿ ಭಾಷೆಯು ಎರಡನೇ ಭಾಷೆಯಾಗಿ ವ್ಯಾವಹಾರಿಕವಾಗಿ ಚಾಲ್ತಿಯಲ್ಲಿದೆ. ಇದರಿಂದಾಗಿ ಭಾಷಾ ಸಾಮರಸ್ಯ ಇರುವುದು ಸ್ಪಷ್ಟವಾಗುತ್ತದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ಹಿರಿಯ ಕವಿ, ಗಾಯಕ ರಹೀಂ ಬಿ.ಸಿರೋಡ್ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾರಿ ನಮ್ಮ ಮಾತೃಭಾಷೆಯಾಗಿದ್ದು, ಈ ಭಾಷೆಯನ್ನು ಉಳಿಸುವುದು ಕವಿ, ಸಾಹಿತಿಗಳ ಜವಾಬ್ದಾರಿ ಮಾತ್ರವಲ್ಲ. ಬ್ಯಾರಿ ಭಾಷೆಯನ್ನು ಉಳಿಸಿವುದು ಪ್ರತೀಯೊಬ್ಬ ಬ್ಯಾರಿಯ ಕರ್ತವ್ಯವು ಆಗಿದೆ ಎಂದರು.
ಮನೆಯಲ್ಲಿ ಡ್ಯಾಡಿ, ಮಮ್ಮಿ ಎಂಬ ಮೋಹವನ್ನು ಬಿಟ್ಟು ಪ್ರೀತಿಯಿಂದ ಬ್ಯಾರಿ ಭಾಷೆಯಲ್ಲೇ ಮಾತನಾಡಿ ಎಂದು ಕರೆ ನೀಡಿದ ಅವರುಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ, ಯಾವುದೇ ಕೆಲಸ, ದೇಶದಲ್ಲಿ ಇದ್ದರೂ ಕೂಡ ಮಾತೃಭಾಷೆಯನ್ನು ಮರೆಯಬೇಡಿ. ಮನೆಯಲ್ಲಿ ಮಾತೃಭಾಷೆಯಲ್ಲೇ ಮಾತನಾಡಿ ಎಂದು ಕಿವಿಮಾತು ಹೇಳಿದರು.
ಮಾತೃ ಭಾಷೆಗಿರುವ ರುಚಿ ಇಂಗ್ಲಿಷ್ ಭಾಷೆಗಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಹೇಳಿದ ಅವರು, ಭಾಷೆ ಬೆಳೆಯಲು ಸಾಹಿತಿಗಳು ಬೇಕು. ಆದರೆ ಸಾಹಿತಿ ಬೆಳೆಯಲು ಭದ್ರತೆ ಬೇಕು. ಕಲಾವಿದರ ಹಸಿವು ನೀಗಿಸುವ ಪ್ರಯತ್ನವೂ ಆಗಬೇಕು. ಹೀಗಾಗಿ ಸಾಹಿತಿ, ಕವಿ ಕಲಾವಿದರ ಬದುಕಿಗೆ ಆಧಾರವಾಗಿ ಒಂದು ಮಾಸಾಶನ ತರಹದ ದಾರಿಯನ್ನು ಸರಕಾರ ಮಾಡಿದಲ್ಲಿ ಎಲ್ಲಾ ಭಾಷೆ, ಸಾಹಿತ್ಯ ಸಂಸ್ಕೃತಿ ಬೆಳೆಯಬಹುದು ಎಂದರು.
ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ಉಮೈರತ್ ಕುಮೇರ್ ಅವರು ಬರೆದ ಬ್ಯಾರಿ ಕಥಾ ಸಂಕಲನವನ್ನು ಶಾಸಕ ರಾಜೇಶ್ ನಾಯಕ್ ಬಿಡುಗಡೆಗೊಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ಮೊಹಿದ್ದೀನ್ ಶಿಕ್ಷಣ ಸಂಸ್ಥೆ ತುಂಬೆ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ತುಂಬೆ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಬೆಳಗಾವಿ ಸೆನೆಟ್ ಸದಸ್ಯ ಡಾ. ಮುಸ್ತಫ ಬಸ್ತಿಕೋಡಿ, ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮುಮ್ತಾಝ್ ಎಚ್.ಐ., ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಹಮ್ಮದ್ ಹನೀಫ್ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ಪಿ.ಎಂ.ಅಶ್ರಫ್ ಪಾಣೆಮಂಗಳೂರು, ಕೋಶಾಧಿಕಾರಿ ಹಂಝ ಬಸ್ತಿಕೋಡಿ, ಗೌರವ ಸಲಹೆಗಾರ ಪಿ. ಮೊಹಮ್ಮದ್ ರಫೀಕ್, ಅಕಾಡೆಮಿ ಸದಸ್ಯ ಸಂಚಾಲಕ ಅಬೂಬಕ್ಕರ್ ಅನಿಲಕಟ್ಟೆ, ಪ್ರಮುಖರಾದ ಪಿ.ಎ. ರಹೀಮ್, ಮಹಮ್ಮದ್ ಆಲಿ, ಬಿ.ಎಸ್.ಮಹಮ್ಮದ್, ಅಬ್ದುಲ್ ಲತೀಫ್ ನೇರಳಕಟ್ಟೆ, ತಾಜುದ್ದೀನ್ ಅಮ್ಮುಂಜೆ, ಖಾಲಿದ್ ಉಜಿರೆ, ಯು. ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಆಲಿ ಸ್ವಾಗತಿಸಿ, ಪಿ.ಎಂ.ಅಶ್ರಫ್ ನಿರೂಪಿಸಿದರು.
ಸಮ್ಮೇಳನ ಆರಂಭಕ್ಕೂ ಮೊದಲು ಶ್ರೀ ಶಾರದಾ ಪ್ರೌಢಶಾಲೆಯ ಬಳಿಯಿಂದ ಸಮ್ಮೇಳನಾಧ್ಯಕ್ಷರನ್ನು ಸಭಾಂಗಣದತ್ತ ಮೆರವಣಿಗೆಯಲ್ಲಿ ಕರೆತರಲಾಯಿತು. ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಧ್ವಜಾರೋಹಣ ನೆರವೇರಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚಾಗೋಷ್ಠಿ, ಮಧ್ಯಾಹ್ನ ಬ್ಯಾರಿ ಕವಿಗೋಷ್ಠಿ, ಸಂಜೆ ಸಮಾರೋಪ ಸಮಾರಂಭ ನಡೆಯಿತು.
