ಎರಡು ವರ್ಷದಲ್ಲಿ 13 ಸಾವಿರ ಕೊಳವೆ ಬಾವಿ: ಸಚಿವ ಎನ್.ಎಸ್. ಬೋಸರಾಜು
ಬೆಳ್ತಂಗಡಿ: ನಮ್ಮ ಸರ್ಕಾರ 2 ವರ್ಷದಲ್ಲಿ ಪಕ್ಷಾತೀತವಾಗಿ ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳ ಅನುಕೂಲಕ್ಕಾಗಿ 13 ಸಾವಿರ ಕೊಳವೆ ಬಾವಿ ಕೊರೆಸಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಾಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಬೆಳ್ತಂಗಡಿ ಪ್ರವಾಸ ಕೈಗೊಂಡಿದ್ದ ವೇಳೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಅಂತರ್ಜಲ ಮಟ್ಟ ಹೆಚ್ಚಿಸಲು ಮತ್ತು ಸುಸ್ಥಿರ ನಿರ್ವಹಣೆಗಾಗಿ ಸರ್ಕಾರವು ಹಲವು ಯೋಜನೆ ಜಾರಿಗೊಳಿಸಿದೆ. ತಾಲ್ಲೂಕಿನಲ್ಲಿ ಕಿಂಡಿಅಣೆಕಟ್ಟೆ, ತಡೆ ಗೋಡೆ ನಿರ್ಮಾಣದ ಬೇಡಿಕೆಯಿದ್ದು, ಸರ್ಕಾರ ಸ್ಪಂದಿಸಲಿದೆ’ ಎಂದರು.
ರಾಜ್ಯದಾದ್ಯಂತ ಅಂತರ್ಜಲ ಅಭಿವೃದ್ಧಿಗಾಗಿ ಕಿಂಡಿ ಅಣೆಕಟ್ಟೆ ಸೇರಿದಂತೆ ಅಟಲ್ ಭೂಜಲ ಯೋಜನೆ ಮೂಲಕ ಕೆರೆಗಳ ಅಭಿವೃದ್ಧಿ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ನಿಗಾ ವಹಿಸಬೇಕು. ಗೊಂದಲ ಆಗದಂತೆ, ವಿನಾಕಾರಣ ಮತದಾರರನ್ನು ಕೈ ಬಿಡದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಜವಾಬ್ದಾರಿ ವಹಿಸಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಾಂ ಮಾತನಾಡಿ, ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿಗೆ ಕಿಂಡಿ ಅಣೆಕಟ್ಟೆ ನಿರ್ಮಾಣದ ಅಗತ್ಯವಿದೆ. ವಿಪರೀತ ಮಳೆಯಿಂದ ನೇರೆ ಭೀತಿ ಉಂಟಾಗುತ್ತದೆ. ನದಿ ಸಮೀಪವಿರುವ ದೇಗುಲಗಳ ಬಳಿ, ಮಸೀದಿ ಸೇರಿದಂತೆ ಅಲ್ಲಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನು ದಾನ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫರ್ನಾಂಡಿಸ್ ಹಳ್ಳಿಮನೆ, ಅಝರ್ ನಾವೂರು, ಪಕ್ಷದ ಪ್ರಮುಖರು ಇದ್ದರು.
ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ ಸ್ವಾಗತಿಸಿ, ದಯಾನಂದ ಬೆಳಾಲು ವಂದಿಸಿದರು. ಸಚಿವರನ್ನು ಸನ್ಮಾನಿಸಲಾಯಿತು.
ಸಚಿವರು ಧರ್ಮಸ್ಥಳ, ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಕೊಕ್ಕಡದ ಮೈಪಾಲದಲ್ಲಿ ಪೂರ್ಣಗೊಂಡಿರುವ ಕಿಂಡಿ ಅಣೆಕಟ್ಟೆ ಸಹಿತ ಸೇತುವೆ ಕಾಮಗಾರಿ ವೀಕ್ಷಿಸಿದರು.