ನಾಗರ ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ರಕ್ಷಿಸಿ 16 ಮರಿಗಳು ಕಾಡಿಗೆ
Tuesday, May 5, 2026
ಬೆಳ್ತಂಗಡಿ: ಬೆಳ್ತಂಗಡಿ ನೆರಿಯ ಗ್ರಾಮದ ಗುಂಡಿಕಂಡ ಬೊಮ್ಮಣ್ಣ ಗೌಡ ಎಂಬವರ ಮನೆಯ ಗೋಡೆಯೊಳಗಡೆ ಕಳೆದ ಕೆಲ ದಿನಗಳ ಹಿಂದೆ ಸಿಕ್ಕಿದ ನಾಗರ ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ರಕ್ಷಿಸಿ 16 ಮರಿಗಳನ್ನು ಉರಗ ಮಿತ್ರ ಕಕ್ಕಿಂಜೆಯ ಸ್ನೇಕ್ ಅನಿಲ್ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಮೊಟ್ಟೆಗಳಿಗೆ ಇರುವೆಗಳು ಮುತ್ತಿಕೊಂಡು, ಅವುಗಳ ಸ್ಥಿತಿ ಅಪಾಯಕಾರಿಯಾಗಿತ್ತು. ಅವುಗಳನ್ನು ಗೋಡೆಯಿಂದ ಹೊರ ತೆಗೆದು ಅಗತ್ಯ ಆರೈಕೆ ನೀಡಿ ಕೃತಕ ಕಾವು ನೀಡುವ ಕೆಲಸವನ್ನು ಮಾಡಿದರು. ಇದೀಗ 16 ಮರಿಗಳು ಮೊಟ್ಟೆಯಿಂದ ಹೊರಬಂದಿತ್ತು. ಆರೋಗ್ಯವಾಗಿದ್ದ ಈ ನಾಗರಹಾವಿನ ಮರಿಗಳನ್ನು ಅರಣ್ಯ ಇಲಾಖೆಯ ಸಹಕಾರದಲ್ಲಿ ಚಾರ್ಮಾಡಿ ಘಾಟಿ ವಿಭಾಗದ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಕಳೆದ ತಿಂಗಳು ತೋಟತ್ತಾಡಿ ಗ್ರಾಮದಲ್ಲಿ ಪತ್ತೆಯಾಗಿದ್ದ 28 ನೀರು ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಮರಿಗಳಿಗೆ ಜೀವದಾನ ನೀಡಿದ್ದೆ. ಇದೀಗ ನೆರಿಯದಲ್ಲಿದ್ದ ನಾಗರಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ, ಕೃತಕ ಕಾವು ನೀಡಿ ಮರಿಗಳನ್ನು ಅರಣ್ಯಕ್ಕೆ ಬಿಟ್ಟಿದ್ದೇನೆ ಎಂದಿದ್ದಾರೆ ಸ್ನೇಕ್ ಅನಿಲ್.