ಶೀಘ್ರದಲ್ಲಿಯೇ ವ್ಯವಸ್ಥಿತ ಬ್ಯಾರಿ ಭವನ ನಿರ್ಮಾಣ: ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಯು.ಟಿ. ಖಾದರ್ ಹೇಳಿಕೆ

ಶೀಘ್ರದಲ್ಲಿಯೇ ವ್ಯವಸ್ಥಿತ ಬ್ಯಾರಿ ಭವನ ನಿರ್ಮಾಣ: ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಯು.ಟಿ. ಖಾದರ್ ಹೇಳಿಕೆ


ಉಳ್ಳಾಲ: ಬ್ಯಾರಿ ಸಮುದಾಯದವರು ಅತ್ಯಂತ ಶ್ರಮಜೀವಿಗಳು ಹಾಗೂ ಗೌರವ, ಸ್ವಾಭಿಮಾನದಿಂದ ಬದುಕಿ ಬಾಳಿದವರೂ ಹೌದು. ಬ್ಯಾರಿ ಭಾಷೆ, ಬ್ಯಾರಿ ಸಾಹಿತ್ಯ, ಬ್ಯಾರಿ ಸಂಸ್ಕೃತಿ-ಪರಂಪರೆಯನ್ನು ನಾವು ಅರ್ಥ ಮಾಡಿಕೊಳ್ಳವುದರೊಂದಿಗೆ ಹಿರಿಯರ ಕೊಡುಗೆ, ಮಾರ್ಗದರ್ಶನದ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಭವಿಷ್ಯದ ಜನಾಂಗಕ್ಕೂ ವರ್ಗಾಯಿಸುವ ಕಾರ್ಯ ಇಂತಹ ಸಮ್ಮೇಳನದ ಮೂಲಕ ಅಗತ್ಯವಾಗಿ ಆಗಬೇಕಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರು ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮೇಲ್ತೆನೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಮಂಗಳವಾರ ಮುಡಿಪು ನಂದರಪದವಿನ ಎಸ್.ಕೆ ಸಭಾಂಗಣದಲ್ಲಿ ನಡೆದ ಉಳ್ಳಾಲ ತಾಲೂಕು ೩ನೇ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದ.ಕ.ಜಿಲ್ಲೆಯ ಬ್ಯಾರಿ, ತುಳು, ಕೊಂಕಣಿ ಭಾಷೆಗಳು ಲಿಪಿಯ ಬಳಕೆ ಇಲ್ಲದೆಯೇ ಸಾವಿರಾರು ವರ್ಷದಿಂದ ಬಾಯಿಂದ ಮಾತನಾಡುವ ಮೂಲಕವೇ ಉಳಿದು ಬೆಳೆದುಕೊಂಡು ಬಂದಿರುವುದು ವಿಶೇಷ. ಬ್ಯಾರಿ ಭಾಷೆ ಕೇವಲ ಭಾಷೆಯಾಗಿ ಉಳಿಯದೆ ಬ್ಯಾರಿ ಜನಾಂಗದ ಸಂಸ್ಕೃತಿ, ವ್ಯಕ್ತಿತ್ವವನ್ನು ಪ್ರತಿನಿಧಿಸುವ ಭಾಷೆಯೂ ಹೌದು. ಬ್ಯಾರಿಭವನ ನಿರ್ಮಾಣಕ್ಕೆ ಎದುರಾಗಿದ್ದ ಅನೇಕ ರೀತಿಯ ತಾಂತ್ರಿಕ ತೊಡಕುಗಳು ನಿವಾರಣೆಯಾಗಿ ಆದಷ್ಟು ಶೀಘ್ರದಲ್ಲಿ ವ್ಯವಸ್ಥಿತ ಬ್ಯಾರಿ ಭವನ ನಿರ್ಮಾಣವಾಗಲಿದೆ ಎಂದರು.

ಸಮ್ಮೇಳನಾಧ್ಯಕ್ಷ ಬಹುಬಾಷಾ ಕವಿ, ಹಾಡುಗಾರ ಬಶೀರ್ ಅಹ್ಮದ್ ಕಿನ್ಯಮಾತನಾಡಿ, ಬ್ಯಾರಿ ಭಾಷೆ ನಮ್ಮ ಪ್ರೀತಿಯ ಭಾಷೆ. ಭಾಷೆ ಉಳಿದರೆ ಜನಾಂಗ ಉಳಿಯುತ್ತದೆ. ಜನಾಂಗ ಬೆಳೆದರೆ ಸಂಸ್ಕೃತಿಯೂ ಬೆಳೆಯುತ್ತದೆ. ನಮ್ಮ ಈ ತಾಯಿ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರದ್ದು ಎಂದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ನಾನಿ ಅಲ್ಯಾರಿಸ್, ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮುಹಮ್ಮದ್ ಇಕ್ಯಾಲ್ ಕೆ, ಉಳ್ಳಾಲ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಉಳ್ಳಾಲ ತಾಲೂಕು ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ ಮತ್ತು ಮುಡಿಪು ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ ಮುಖ್ಯ ಅತಿಥಿಗಳಾಗಿದ್ದರು.

ಸಮಾರಂಭದಲ್ಲಿ ಝುಲೇಖ ಮುಮ್ರಾಜ್ ಅವರ ’ನಿಲಾವು’ (ಲೇಖನಗಳ ಸಂಕಲನ), ಆಯಿಷಾ ಯು.ಕೆ ಸಂಪಾದಕತ್ವದ ’ಹಸ್ರತ್’ (ಕವನ ಸಂಕಲನ) ಬ್ಯಾರಿ ಕೃತಿಗಳನ್ನು ಯು.ಟಿ.ಖಾದರ್ ಅವರು ಲೋಕಾರ್ಪಣೆಗೊಳಿಸಿದರು.

ಆರಂಭದಲ್ಲಿ ಹೂಹಾಕುವ ಕಲ್ಲು ಜಂಕ್ಷನ್‌ನಿಂದ ಸಮ್ಮೇಳನ ಸಭಾಂಗಣದ ತನಕ ನಡೆಯಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಸ್.ಕೆ. ಅಬ್ದುಲ್ ಖಾದರ್ ಹಾಜಿ ಉದ್ಘಾಟಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್.ಧ್ವಜಾರೋಹಣ ನೆರವೇರಿಸಿದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ವಿ.ಇಬ್ರಾಹಿಂ ನಡುಪದವು, ಕಾರ್ಯಾಧ್ಯಕ್ಷ ಆಲಿಕುಂಞ ಪಾರೆ, ಗೌರವ ಕಾರ್ಯದರ್ಶಿ ಎನ್ ಎಸ್ ನಾಸೀರ್ ನಡುಪದವು, ಅಕಾಡೆಮಿಯ ಸದಸ್ಯರಾದ ಬಿ.ಎಸ್.ಮುಹಮ್ಮದ್, ಶರೀಫ್ ಬಾಳಿಲ, ಸಾರಾ ಅಲಿ ಪರ್ಲಡ್ಕ, ಶಮೀರಾ ಜಹಾನ್, ಪ್ರಧಾನ ಕಾರ್ಯದರ್ಶಿ ಹಂಝ, ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿ ಹಂಝ ಮಲಾರ್, ಮಹಿಳಾ ಘಟಕದ ಸಂಚಾಲಕ ಸಿಹಾನ ಬಿ.ಎಂ. ಮತ್ತಿತರರು ಉಪಸ್ಥಿತರಿದ್ದರು.

ಮೇಲ್ತನೆ ಅಧ್ಯಕ್ಷ ಮಂಗಳೂರ ರಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ ಸ್ವಾಗತಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಹಮೀದ್ ಹಸನ್ ಮಾಡೂರು ವಂದಿಸಿದರು.

ಅಕಾಡೆಮಿಯ ಸದಸ್ಯ ಯು.ಎಚ್.ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಚರ್ಚಾಗೋಷ್ಢಿ, ಕವಿಗೋಷ್ಠಿ, ಮೆಹಂದಿ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಕನ್ನಡದಿಂದ ಬ್ಯಾರಿ ಭಾಷೆಗೆ ಅನುವಾದ ಸ್ಪರ್ಧೆ ನಡೆಯಿತು. ಹಾಗೂ ಸಾಧಕರಿಗೆ ಸನ್ಮಾನ, ಬ್ಯಾರಿ ನಾಟಕ ಪ್ರದರ್ಶನ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article