ಚಾರ್ಮಾಡಿಯಲ್ಲಿ ಪದೇ ಪದೇ ಪ್ರತ್ಯಕ್ಷವಾಗುತ್ತಿರುವ ಕಾಡಾನೆ: ಆತಂಕ

ಚಾರ್ಮಾಡಿಯಲ್ಲಿ ಪದೇ ಪದೇ ಪ್ರತ್ಯಕ್ಷವಾಗುತ್ತಿರುವ ಕಾಡಾನೆ: ಆತಂಕ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಒಂಟಿ ಕಾಡಾನೆ ಪದೇಪದೆ ಕಾಣಿಸಿಕೊಳ್ಳುತ್ತಿದ್ದು, ಗುರುವಾರ ಬೆಳಗ್ಗೆ ಮತ್ತೆ ಕಂಡುಬಂದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ. ಒಂಟಿ ಆನೆ ಸಂಚಾರದಿಂದಾಗಿ ವಾಹನಗಳು ಸಂಚರಿಸಲು ಸಾಧ್ಯವಾಗದೆ ಟ್ರಾಫಿಕ್ ಜಾಮ್ ಸಾಮಾನ್ಯವಾಗಿ ಬಿಟ್ಟಿದೆ. ತಾಸುಗಟ್ಟಲೆ ಪ್ರಯಾಣಿಕರು ಆತಂಕದಲ್ಲೇ ರಸ್ತೆ ಮಧ್ಯೆ ನಿಲ್ಲುವ ಪರಿಸ್ಥಿತಿ ಇದೆ.

ಘಾಟಿ ರಸ್ತೆಯ ಬದಿಯಲ್ಲಿ ಕಾಣಿಸಿಕೊಳ್ಳುವ  ಕಾಡಾನೆ ಏನೂ ಮಾಡುವುದಿಲ್ಲ ಎನ್ನುವ ಸುದ್ದಿ ಹಬ್ಬಿದೆ. ಇದೇ ಧೈರ್ಯದಿಂದ ಸಾಕಷ್ಟು ಮಂದಿ ಪ್ರಯಾಣಿಕರು ಕಾಡಾನೆ ಜತೆ ಹುಚ್ಚಾಟ ನಡೆಸುವುದು ಕಂಡುಬರುತ್ತಿದೆ. ಕಾಡಾನೆಯ ಹತ್ತಿರದವರೆಗೂ ಹೋಗಿ ಪೋಟೋ, ವೀಡಿಯೋ ಕ್ಲಿಕ್ಕಿಸುತ್ತ ಮೈಮರೆಯುತ್ತಾರೆ. ಆದರೆ ಕಾಡಾನೆ ಕೋಪಗೊಂಡರೆ ಭಾರೀ ಅಪಾಯ ಎದುರಾಗುವ ಸಾಧ್ಯತೆ ಇದ್ದೇ ಇದೆ.

ಮಂಜು ಕವಿದಾಗ ಗೋಚರ ಆಗುವುದಿಲ್ಲ

ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಅಬ್ಬರಿಸಲಿದ್ದು, ದಿನವಿಡೀ ಮಳೆಯಾಗುವ ವೇಳೆ ಮಂಜು ಕವಿದಾಗ ಕಾಡಾನೆ ಇರುವುದು ಕಾಣಿಸದೆ ಢಿಕ್ಕಿ ಹೊಡೆಯುವ ಸಾಧ್ಯತೆ ಇದೆ. ಹೆಚ್ಚಾಗಿ ಈ ಕಾಡಾನೆ ತಿರುವು ಭಾಗದಲ್ಲೇ ಕಾಣಿಸಿಕೊಳ್ಳುತ್ತಿದ್ದು, ವಾಹನ ಚಾಲಕರು ಕಾಡಾನೆಯ ಹತ್ತಿರಕ್ಕೆ ತಲುಪುವವರೆಗೂ ಗಮನಕ್ಕೆ ಬರುವುದಿಲ್ಲ. ಬೀದಿ ದೀಪಗಳು ಇಲ್ಲದ್ದರಿಂದಲೂ ಅಪಾಯ ಸಾಧ್ಯತೆ ಇದೆ.

ಕಾಡಾನೆಯಿಂದ ಅಪಾಯ ಇದ್ದೇ ಇದೆ. ಅರಣ್ಯ ಇಲಾಖೆ ಒಂಟಿ ಕಾಡಾನೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರೋಪಾಯ ಕಂಡು ಹಿಡಿಯುವಂತೆ ಆಗ್ರಹ ಕೇಳಿ ಬಂದಿದೆ. 

ಘಾಟಿ ರಸ್ತೆಯಲ್ಲಿ ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಸಿಗುವುದಿಲ್ಲ. ಹೀಗಾಗಿ ಕಾಡಾನೆ ಇರುವ ವಿಷಯವನ್ನು ಅರಣ್ಯ ಇಲಾಖೆ ಗಮನಕ್ಕೆ ತರುವುದು  ಕಷ್ಟ. ಮೊದಲು ಕಂಡವರು ಚೆಕ್‌ಪೋಸ್ಟ್‌ನಲ್ಲಿ ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಸಿಬಂದಿ  ಸ್ಥಳಕ್ಕೆ ತಲುಪುವ ಹೊತ್ತಿಗೆ ಕಾಡಾನೆ ಹೋಗಿರುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article