ಕೋಟೇಶ್ವರ ಅಂಡರ್ ಪಾಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್: ಹೈರಾಣಾದ ಜನರು
Wednesday, May 13, 2026
ಕುಂದಾಪುರ: ಕೋಟೇಶ್ವರ ಪೇಟೆಯ ಹಾಲಾಡಿ ಜಂಕ್ಷನ್ ನಲ್ಲಿನ ಅಂಡರ್ ಪಾಸ್ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ಉಂಟಾದ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಹೈರಾಣಾದರು. ಕೋಟೇಶ್ವರ ಪೇಟೆ, ಉಡುಪಿ, ಕುಂದಾಪುರ, ಹಾಲಾಡಿ ನಾಲ್ಕು ಕಡೆಗಳಿಂದ ಬಂದ ಲಘು ಮತ್ತು ಘನ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಜಾಮ್ ನಲ್ಲಿ ಸಿಲುಕಿದ ವಾಹನಗಳು ಸುಮಾರು ಅರ್ಧ ಗಂಟೆ ಎತ್ತ ಸರಿಯಲೂ ಅವಕಾಶವಿಲ್ಲದೆ ಪರದಾಡಬೇಕಾಯಿತು.
ಅಂಡರ್ ಪಾಸ್ ನಲ್ಲಿ ಯಾವುದೇ ಟ್ರಾಫಿಕ್ ಸಿಗ್ನಲ್ ಗಳಿಲ್ಲ. ದಿನವೂ ಅಲ್ಲಿ ನಿಂತಿರುತ್ತಿದ್ದ ಹೋಮ್ ಗಾರ್ಡ್ ಸಿಬ್ಬಂದಿ ಬುಧವಾರ ಇರಲಿಲ್ಲ. ಎಲ್ಲೆಡೆ ಮದುವೆ - ಮುಂಜಿ, ವಿಶೇಷ ಸಮಾರಂಭಗಳಿದ್ದು ಜನ, ವಾಹನ ಸಂಚಾರವೂ ಜಾಸ್ತಿಯಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಿಯಮಗಳ ಪಾಲನೆಯಿಲ್ಲದೆ ಅವಸರವೇ ಮುಖ್ಯವಾಗಿರುವ ಆಟೋ, ದ್ವಿಚಕ್ರ ವಾಹನಗಳವರ ತಾಳ್ಮೆ ರಹಿತ ಚಾಲನೆಯಿಂದಾಗಿ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ನಿತ್ಯದ ಗೋಳು. ಈ ನಡುವೆ ಎಕ್ಸ್ ಪ್ರೆಸ್ ಬಸ್ಸುಗಳವರ ಧಾವಂತವೂ ಜಾಮ್ ಗೆ ಕಾರಣವಾಗುತ್ತಿದೆ. ಬಸ್ ಗಳವರು ಕರ್ಕಶ ಹಾರ್ನ್ ಬಾರಿಸುತ್ತಾ ನುಗ್ಗಿ ಬರುವುದನ್ನು ಕಂಡರೆ ರಸ್ತೆ ಬದಿಗೆ ನಿಂತವರಿಗೂ ನಡುಕ ಉಂಟಾಗುತ್ತದೆ. ನಿತ್ಯವೂ ಇಲ್ಲಿ ವಾಹನಗಳವರು ತೊಂದರೆ ಅನುಭವಿಸುತ್ತಿದ್ದರೂ ಕುಂದಾಪುರ ಸಂಚಾರಿ ಪೊಲೀಸರು ಗಮನ ಹರಿಸದೆ ಇರುವುದು ದುರಂತ.
ಕೋಟೇಶ್ವರ ಪೇಟೆ ಕಡೆಯಿಂದ ಬರುವ ಮಾರುತಿ ವನ ರಸ್ತೆ, ಉಡುಪಿ, ಕುಂದಾಪುರ ಕಡೆಯ ರಸ್ತೆಗಳು ಮತ್ತು ಹಾಲಾಡಿ ರಸ್ತೆಗಳು ಸೇರುವ ಈ ಅಂಡರ್ ಪಾಸ್ ಬಳಿಯೇ ಇರುವ ಬಸ್ ನಿಲ್ದಾಣವನ್ನು ಅಲ್ಲಿಂದ ಕೆಲವು ಮಾರು ದೂರದ ಕೊಸ್ಟಲ್ ಕ್ರೌನ್ ಮಾಲ್ ಎದುರಿಗೆ ಸ್ಥಳಾಂತರಿಸಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. ಆದರೆ, ಸ್ಥಳೀಯಾಡಳಿತ ಮತ್ತು ಟ್ರಾಫಿಕ್ ಪೊಲೀಸರು ಇದಕ್ಕೆ ಸ್ಪಂದಿಸಿಲ್ಲ. ಮಾಲ್ ಎದುರು ಬಸ್ ನಿಲ್ದಾಣಕ್ಕಾಗಿಯೇ ಕೋಟೇಶ್ವರ ರೋಟರಿಯವರು ಒಂದು ತಂಗುದಾಣವನ್ನೂ ಕಟ್ಟಿಸಿಕೊಟ್ಟಿದ್ದರು. ಆದರೆ ಅದೀಗ ರಾಷ್ಟ್ರೀಯ ಹೆದ್ದಾರಿ ಆಗಲೀಕರಣಕ್ಕೆ ಬಲಿಯಾಗಿ ಪರ್ಯಾಯ ವ್ಯವಸ್ಥೆ ಇಲ್ಲದಂತಾಗಿದೆ.
ಹಾಲಾಡಿ ಜಂಕ್ಷನ್ ನಲ್ಲಿ ಹಗಲಿನ ಸಮಸ್ಯೆ ಯೊಂದಾದರೆ, ರಾತ್ರಿಯ ಬೆಂಗಳೂರು ಬಸ್ಸುಗಳ ನಿಲುಗಡೆಯಿಂದಾಗುವ ಸಮಸ್ಯೆ ಇನ್ನೊಂದು. ಈ ಎಲ್ಲಾ ಸಮಸ್ಯೆಗಳಿಗೂ ಟ್ರಾಫಿಕ್ ಪೋಲಿಸರು ಶೀಘ್ರ ಒಂದು ಪರಿಹಾರ ಕಲ್ಪಿಸಬೇಕಾಗಿ ಸ್ಥಳೀಯರು ಕೋರಿದ್ದಾರೆ.

