ಅಂತರ್ ರಾಷ್ಟ್ರೀಯ ಖ್ಯಾತಿಯ ಈಜುಪಟುವಿಗೆ ಮೋಸ: ಪ್ರಕರಣ ದಾಖಲು

ಅಂತರ್ ರಾಷ್ಟ್ರೀಯ ಖ್ಯಾತಿಯ ಈಜುಪಟುವಿಗೆ ಮೋಸ: ಪ್ರಕರಣ ದಾಖಲು

ಕುಂದಾಪುರ: ವ್ಯವಹಾರದ ಹೆಸರಿನಲ್ಲಿ ಅಂತರ್ ರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯೋರ್ವರಿಂದ ಹಣವನ್ನು ಸಾಲವಾಗಿ ಪಡೆದು, ನಂಬಿಕೆ ದ್ರೋಹ ಎಸಗಿದ ಬಗ್ಗೆ ಕೋಟ ಪೊಲೀಸರಿಗೆ ದೂರು ನೀಡಲಾಗಿದೆ.

ಅಂತರ್ ರಾಷ್ಟ್ರೀಯ ಖ್ಯಾತಿಯ ಈಜು ಪಟು ಗುಂಡ್ಮಿಯ ಗೋಪಾಲ ಖಾರ್ವಿ ಎಂಬವರೇ ಹೀಗೆ ಮೋಸಹೋದವರು. ತಮ್ಮ ಬಂಧುಗಳೇ ಆದ ದಂಪತಿಯಿಂದ ಇವರು ಮೋಸಕ್ಕೊಳಗಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ನ್ಯಾಯಾಲಯದ ನಿರ್ದೇಶನದನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಪ್ರಕರಣದ ವಿವರ: 

ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದ ನಿವಾಸಿ, ಈಜು ತರಬೇತುದಾರರಾದ ಗೋಪಾಲ ಖಾರ್ವಿ (50) ಅವರ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಖಾರ್ವಿಯವರ ಸಂಬಂಧಿಕರಾದ ರವೀಂದ್ರ ಖಾರ್ವಿ ಹಾಗೂ ಪ್ರೀತು ರವೀಂದ್ರ ಖಾರ್ವಿ ಎಂಬುವವರು ವ್ಯವಹಾರದ ನೆಪದಲ್ಲಿ ಗೋಪಾಲ ಖಾರ್ವಿ ಅವರಿಂದ ಒಟ್ಟು 9,50,000 ರೂ. ಹಣವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಪಡೆದ ಹಣದ ಪೈಕಿ ಆರೋಪಿಗಳು ಇದುವರೆಗೆ ಕೇವಲ 6,27,000 ರೂಪಾಯಿಗಳನ್ನು ಮಾತ್ರ ಮರಳಿಸಿದ್ದು, ಉಳಿದ 3,23,000 ರೂಪಾಯಿ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ. ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, ಆರೋಪಿಗಳು ಹಣ ನೀಡದೆ ಇವತ್ತು, ನಾಳೆ ಎಂದು ಕಾಲಹರಣ ಮಾಡಿದ್ದಲ್ಲದೆ, ಗೋಪಾಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ ಎಂದೂ ಹೇಳಲಾಗಿದೆ.

ಆರೋಪಿಗಳು ಉದ್ದೇಶಪೂರ್ವಕವಾಗಿಯೇ ತಮಗೆ ಮೋಸ ಮಾಡುವ ಮತ್ತು ನಷ್ಟ ಉಂಟುಮಾಡುವ ಇರಾದೆ ಹೊಂದಿದ್ದಾರೆಂದು ಗೋಪಾಲ ಖಾರ್ವಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಇದೀಗ ಕೋಟ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article