ವಿಜಯ್ ಮೊದಲೇ ಕಾಂಗ್ರೆಸ್ ಸೇರಬೇಕಿತ್ತು: ಸಚಿವ ದಿನೇಶ್ ಗುಂಡೂರಾವ್
ನಗರದಲ್ಲಿ ಇಂದು ತನ್ನನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳು ನಾಡಿನ ಚುನಾವಣಾ ಫಲಿತಾಂಶದ ಬಳಿಕ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನವರು ಭಿಕ್ಷೆ ಬೇಡುವ ಪರಿಸ್ಥಿತಿ ಇದೆ ಎಂದು ಚಲವಾದಿ ನಾರಾಯಣ ಸ್ವಾಮಿಯವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ಟಿವಿಯಲ್ಲಿ ಸುದ್ದಿಯಾಗಬೇಕು ಅದಕ್ಕಾಗಿ ಮಾತನಾಡುತ್ತಾರೆ. ಅದಕ್ಕೆಲ್ಲ ಉತ್ತರಿಸುವ ಅಗತ್ಯವೇ ಇಲ್ಲ. ಬಿಜೆಪಿ ದೇಶದಲ್ಲಿ ಮಾತ್ರವಲ್ಲದೆ, ಇತ್ತೀಚೆಗೆ ಬಂಗಾಳದಲ್ಲಿ ಚುನಾವಣೆಯನ್ನು ಯಾವ ರೀತಿ ನಿರ್ವಹಿಸಿದೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಅಧಿಕಾರ ದುರುಪಯೋಗ, ಚುನಾವಣಾ ಆಯೋಗ ಬಳಸಿಕೊಂಡಿದೆ. ಎಸ್‌ಐಆರ್ ಮೂಲಕ ಆಗಿರುವ ಘಟನೆಗಳ ಮೂಲ ಅಲ್ಲಿ ನೇರ ಚುನಾವಣೆಯೇ ನಡೆದಿಲ್ಲ ಎಂದು ಹೇಳಬೇಕಾಗುತ್ತದೆ. ಇಂತಹ ಕೋಮುವಾದಿ ಹಾಗೂ ಸರ್ವಾಧಿಕಾರಿ ಧೋರಣೆ ಇರುವ ಶಕ್ತಿ ವಿರುದ್ಧ ಹೋರಾಟ ಆಗಬೇಕಾಗಿದೆ ಎಂದವರು ಹೇಳಿದರು.
ಕೈಗೆ ಶಕ್ತಿ..
ಪಂಚ ರಾಜ್ಯ ಚುನಾವಣೆಯಲ್ಲಿ ರಾಜ್ಯದ ಉಪಚುನಾವಣೆಯಲ್ಲಿಯೂ ಪಕ್ಷಕ್ಕೆ ಉತ್ತಮ ಫಲಿತಾಂಶ ದೊರಕಿದೆ. ಕೇರಳದಲ್ಲಿಯೂ ಜಯವಾಗಿದ್ದು, ಪಕ್ಷಕ್ಕೆ ಜನತೆ ಮತ್ತಷು ಶಕ್ತಿ ತುಂಬಿದ್ದಾರೆ ಎಂದರು.
ಸಚಿವ ಸಂಪುಟ ಮೂರು ವರ್ಷದ ಬಳಿಕ ವಿಸ್ತರಣೆ ಮಾಡುವ ತೀರ್ಮಾನ ಈಗಾಗಲೇ ಇದೆ. ಕೇರಳದಲ್ಲಿ ಸರಕಾರ ರಚನೆಯಾದ ಬಳಿಕ ಕರ್ನಾಟಕದ ಬಗ್ಗೆಯೂ ವರಿಷ್ಟರು ತೀರ್ಮಾನ ಕೈಗೊಳ್ಳಲಿದ್ದಾರೆ. ಈ ನಡುವೆ ಯಾರು ಯಾವ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆಂಬುದು ನನಗೆ ತಿಳಿದಿಲ್ಲ ಎಂದರು.
ಸಿಎಂ ರೇಸ್‌ನಲ್ಲಿ ನೀವು ಇದ್ದೀರಾ ಎಂಬ ಪ್ರಶ್ನೆಗೆ, ಮೂರು ವರ್ಷದ ನಂತರ ನೀವು ಈ ಪ್ರಶ್ನೆ ಕೇಳುತ್ತಿದ್ದೀರಾ, ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಆಗದು. ಪಕ್ಷದ ವರಿಷ್ಟರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ. ಪಕ್ಷದ ಹಿತದ ದೃಷ್ಟಿಯಿಂದ ಏನು ಮಾಡಬೇಕು ಎಂಬುದನ್ನು ಅವರು ತೀರ್ಮಾನಿಸುತ್ತಾರೆ. ಇದು ಕೇವಲ ಒಬ್ಬ ವ್ಯಕ್ತಿಯ ವಿಚಾರ ಅಲ್ಲ. ಪಕ್ಷದ ವಿಚಾರ. ಶಾಸಕರೆಲ್ಲರೂ ಒಗ್ಗಟ್ಟಿನ ಪ್ರಯತ್ನದಿಂದ ಬಂದಿರುವುದು. ನಾವೆಲ್ಲಾ ಒಂದಾಗಿ ಹೋಗಬೇಕಿದೆ. ಪಕ್ಷ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ವರಿಷ್ಟರು ಕ್ರಮ ವಹಿಸುತ್ತಾರೆ ಎಂದು ಹೇಳಿದರು.
ಈ ತಿಂಗಳ 15ಕ್ಕೆ ಸಿಹಿಯ ಸುದ್ದಿ ಬರುತ್ತದೆ ಎಂದು ಡಿ.ಕೆ. ಸುರೇಶ್ ಅವರು ಹೇಳಿರುವ ಬಗ್ಗೆ ನನಗೆ ಗೊತ್ತಿಲ್ಲ. ಯಾರೂ ಯಾವುದೇ ದಿನಾಂಕ ನಿಗದಿ ಮಾಡಲು ಆಗದು. ಅಂತಿಮವಾಗಿ ಕೇಂದ್ರದ ವರಿಷ್ಟರು ತೀರ್ಮಾನ ಕೈಗೊಳ್ಳಲಿದ್ದಾರೆ. ಅವರ ಸಮಯ, ಮುಹೂರ್ತವನ್ನು ನಾವು ತೀರ್ಮಾನ ಮಾಡಲು ಆಗದು ಎಂದರು.