ಗಡಿ ವಿವಾದ-ಕತ್ತಿ ಹಲ್ಲೆ: ಗಂಭೀರ ಗಾಯ

ಗಡಿ ವಿವಾದ-ಕತ್ತಿ ಹಲ್ಲೆ: ಗಂಭೀರ ಗಾಯ

ಕುಂದಾಪುರ: ಜಾಗದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ  ಘಟನೆ ಶಂಕರಣರಾಯಣ ಸಮೀಪದ ಬೆಳ್ವೆ ಗ್ರಾಮದಲ್ಲಿ ನಡೆದಿದೆ.

ಕತ್ತಿ ಏಟಿನಿಂದ ಬೆಳ್ವೆ ನಿವಾಸಿ ಮುರಳೀಧರ ಅಲ್ಸೆ (37) ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.​

ಘಟನೆಯ ವಿವರ:​

ಮೇ 4ರಂದು ಮಧ್ಯಾಹ್ನ ಸುಮಾರು 3:30 ಗಂಟೆಗೆ ಮುರಳೀಧರ ಅಲ್ಸೆ ಅವರು ತಮ್ಮ ಜಾಗದ ಗಡಿಭಾಗದಲ್ಲಿ ಬೇಲಿ ಕಂಬವನ್ನು ಸರಿಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ಪ್ರಕಾಶ ಅಲ್ಸೆ ಈ ಜಾಗ ನನಗೇ ಸೇರಿದ್ದು, ಬೇಲಿ ಮುಟ್ಟಿದರೆ ನಿನ್ನನ್ನು ಕಡಿದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.​ 

ಇದಕ್ಕೆ ಉತ್ತರಿಸಿದ ಮುರಳೀಧರ ಅವರು ಗಡಿ ಸಮಸ್ಯೆ ಇದ್ದರೆ ಸರ್ವೆ ಮಾಡಿಸೋಣ, ಅಲ್ಲಿಯವರೆಗೆ ಸುಮ್ಮನೆ ವಾದ ಮಾಡಬೇಡಿ ಎಂದು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಇದರಿಂದ ಕೆರಳಿದ ಆರೋಪಿ ಪ್ರಕಾಶ ಅಲ್ಸೆ, ತಾನು ತಂದಿದ್ದ ಕತ್ತಿಯಿಂದ ಮುರಳೀಧರ ಅವರ ಕುತ್ತಿಗೆಯ ಭಾಗಕ್ಕೆ ಗುರಿಯಾಗಿಸಿ ಕಡಿದಿದ್ದಾನೆ.​

ಆರೋಪಿ ಕತ್ತಿ ಬೀಸಿದ ತಕ್ಷಣ ಮುರಳೀಧರ ಅವರು ರಕ್ಷಣೆಗಾಗಿ ತಮ್ಮ ಎಡಗೈಯನ್ನು ಅಡ್ಡ ಹಿಡಿದಿದ್ದಾರೆ. ಇದರಿಂದಾಗಿ ಅವರ ಎಡಗೈಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಅಲ್ಲಿಗೆ ಮುರಳೀಧರ ಅವರ ಪತ್ನಿ ವೈಶಾಲಿ ಅವರು ಧಾವಿಸಿ ಬರುತ್ತಿದ್ದಂತೆ, ಆರೋಪಿ ಪ್ರಕಾಶ ಅಲ್ಸೆ ಕತ್ತಿಯನ್ನು ಸ್ಥಳದಲ್ಲೇ ಎಸೆದು, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.​

ಗಾಯಾಳುವನ್ನು ತಕ್ಷಣ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

​ಈ ಭೀಕರ ಹಲ್ಲೆಯ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article