ಕರ್ಣಾಟಕ ಬ್ಯಾಂಕ್‌ಗೆ ದಾಖಲೆಯ 1,310.50 ಕೋಟಿ ರೂ. ಲಾಭ

ಕರ್ಣಾಟಕ ಬ್ಯಾಂಕ್‌ಗೆ ದಾಖಲೆಯ 1,310.50 ಕೋಟಿ ರೂ. ಲಾಭ


ಮಂಗಳೂರು: ಕರ್ಣಾಟಕ ಬ್ಯಾಂಕ್‌ನ 2025-26ನೇ ಆರ್ಥಿಕ ವರ್ಷದಲ್ಲಿ ದಾಖಲೆಯ 1,310.50 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕ್‌ನ ಒಟ್ಟು ವ್ಯವಹಾರವು ಸಾರ್ವಕಾಲಿಕ ಗರಿಷ್ಠ 1,92,118.67 ಕೋಟಿ ರೂ.ಗೆ ಏರಿಕೆಯಾಗಿದೆ.

ಮಂಗಳೂರಿನಲ್ಲಿ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ 2026ರ ಮಾರ್ಚ್ 31ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಾಗೂ ವಾರ್ಷಿಕ ಹಣಕಾಸು ಫಲಿತಾಂಶಗಳನ್ನು ಅಂಗೀಕರಿಸಲಾಯಿತು. ಇದೇ ವೇಳೆ ಶೇ.50 ಲಾಭಾಂಶವನ್ನು ಘೋಷಿಸಲು ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ.

ಬ್ಯಾಂಕ್‌ನ ಒಟ್ಟು ಠೇವಣಿಗಳು 2026ರ ಮಾರ್ಚ್ ಅಂತ್ಯದ ವೇಳೆಗೆ 1,08,778.75 ಕೋಟಿ ರೂ.ಗೆ ತಲುಪಿದ್ದು, ಸಿಎಎಸ್‌ಎ ಠೇವಣಿಗಳು 36,559.66 ಕೋಟಿ ರೂ.ಗೆ ಏರಿಕೆಯಾಗಿದೆ. ಸಿಎಎಸ್‌ಎ ಅನುಪಾತವು ಶೇ.33.61ಕ್ಕೆ ಹೆಚ್ಚಳವಾಗಿದೆ.

ಬ್ಯಾಂಕ್‌ನ ಒಟ್ಟು ಮುಂಗಡಗಳು 83,339.92 ಕೋಟಿ ರೂ.ಗೆ ಏರಿಕೆಯಾಗಿದ್ದು, ನಿವ್ವಳ ಬಡ್ಡಿ ಅಂತರ ಶೇ.3.07ಕ್ಕೆ ಸುಧಾರಿಸಿದೆ. 2026ರ ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್ 408.19 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ್ದು, ಇದು ಹಿಂದಿನ ತ್ರೈಮಾಸಿಕಕ್ಕಿಂತ ಶೇ.40ರಷ್ಟು ಹೆಚ್ಚಳವಾಗಿದೆ.

ಬ್ಯಾಂಕ್‌ನ ಆಸ್ತಿ ಗುಣಮಟ್ಟದಲ್ಲಿಯೂ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಒಟ್ಟು ಅನುತ್ಪಾದಕ ಆಸ್ತಿಗಳ ಪ್ರಮಾಣ ಶೇ.2.78ಕ್ಕೆ ಹಾಗೂ ನಿವ್ವಳ ಅನುತ್ಪಾದಕ ಆಸ್ತಿಗಳ ಪ್ರಮಾಣ ಶೇ.0.98ಕ್ಕೆ ಇಳಿಕೆಯಾಗಿದೆ.

ಈ ಕುರಿತು ಮಾತನಾಡಿದ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಅವರು, ‘ಬ್ಯಾಂಕ್‌ನ ಸ್ಥಿರ ವ್ಯವಹಾರ ಮಾದರಿ, ಕಾರ್ಯಕ್ಷಮತೆ ಹಾಗೂ ಗ್ರಾಹಕರ ವಿಶ್ವಾಸದಿಂದ ದಾಖಲೆಯ ಲಾಭ ಗಳಿಸಲು ಸಾಧ್ಯವಾಗಿದೆ. ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ ಇನ್ನಷ್ಟು ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವತ್ತ ಗಮನ ಹರಿಸಲಾಗುವುದು’ ಎಂದು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article