ಮೇ.17-18 ರಂದು ರಾಜ್ಯ ಮಟ್ಟದ ಗೇರು ಮೇಳ ಹಾಗೂ ಕಾರ್ಯಗಾರ-2026

ಮೇ.17-18 ರಂದು ರಾಜ್ಯ ಮಟ್ಟದ ಗೇರು ಮೇಳ ಹಾಗೂ ಕಾರ್ಯಗಾರ-2026


ಮಂಗಳೂರು: ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮೇ. 17 ಮತತು 18 ರಂದು ನಗರದ ಕದ್ರಿ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಗೇರು ಮೇಳ ಹಾಗೂ ಕಾರ್ಯಗಾರ-2026 ನಡೆಯಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಅವರು ಇಂದು ನಗರದ ಸರ್ಕಿಟ್‌ಹೌಸ್‌ನಲ್ಲಿ ಮೇಳದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ‘ಮನೆಗೊಂದು ಗೇರು ಗಿಡ’, ‘ಗೇರು ಗಿಡ ಬಡವರ ಪಾಲಿನ ಕಲ್ಪವೃಕ್ಷ’, ಹಸಿರು ಗೇರು ರೈತರ ಬದುಕು ಬಂಗಾರ’ ಎಂಬ ಘೋಷಣೆಯೊಂದಿಗೆ ಮೇಳ ನಡೆಯಲಿದ್ದು, ಗೇರು ಕೃಷಿಯ ಅಭಿವೃದ್ಧಿಯೊಂದಿಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.

ಗೇರು ಕೃಷಿಯು ಕರಾವಳಿ ಜನರೊಂದಿಗೆ ಬೆರೆತುಕೊಂಡಿದ್ದು, ಅವಿನಾಭಾವ ಸಂಬಂಧವನ್ನು ಹೊಂದಿದೆ. ನಮ್ಮ ಹಿರಿಯರು ಬೀಡಿ ಕಟ್ಟುವುದು, ಗೇರು ಕೈಗಾರಿಕೆಯಲ್ಲಿ ಕೆಲಸ, ಹೆಂಚು ಕೈಗಾರಿಕೆಯಲ್ಲಿ ಕೆಲಸ ಹಾಗೂ ಮೀನು ಕೃಷಿಯನ್ನು ಮಾತ್ರ ಮಾಡಿ ಇಂದು ಅವರು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಜೀವನವನ್ನು ನೀಡಿದ್ದಾರೆ ಎಂದರು.

ಗೇರಿಗೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆ ಇದ್ದು, ಇಲ್ಲಿನ ಇಳುವರಿ ಸಾಲದ ಕಾರಣ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದುದರಿಂದ ಪ್ರತಿಯೊಂದು ಮನೆಯಲ್ಲಿಯೂ ಗೇರು ಗಿಡವನ್ನು ಬೆಳೆಸುವ ಮೂಲ ಅದರ ಪ್ರಾಮುಖ್ಯತೆಯನ್ನು ತಿಳಿಸಬೇಕು ಎಂದು ಹೇಳಿದರು.

ಮೇಳದಲ್ಲಿ 1,000 ಗೇರು ಗಿಡಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ, 10 ಜನ ಸಾಧಕ ಕೃಷಿಕರಿಗೆ ಸನ್ಮಾನ, ಬೇರೆ ಬೇರೆ ತಳಿಯ ಬಗ್ಗೆ ಪರಿಚಯ, ಗೇರು ಬೀಜ ಮಾತ್ರವಲ್ಲ ಹಣ್ಣಿನಿಂದ ಕೂಡ ಮೌಲ್ಯವರ್ದಿತ ಉತ್ಪನ್ನಗಳನ್ನು ತಯಾರಿಸಿ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಮೇಳದಲ್ಲಿ 5-6 ಗೋಷ್ಠಿಗಳನ್ನು ಹಮ್ಮಿಕೊಂಡಿದ್ದು, ತಜ್ಷರು ಹಾಗೂ ಸಾಧಕ ಕೃಷಿಕರಿಂದ ಗೋಷ್ಠಿಗಳು ನಡೆಯಲಿವೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ, ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article