ಮೇ 17-18ರಂದು ಕದ್ರಿ ಉದ್ಯಾನವನದಲ್ಲಿ ರಾಜ್ಯ ಮಟ್ಟದ ಗೇರು ಮೇಳ-ಕಾರ್ಯಾಗಾರ

ಮೇ 17-18ರಂದು ಕದ್ರಿ ಉದ್ಯಾನವನದಲ್ಲಿ ರಾಜ್ಯ ಮಟ್ಟದ ಗೇರು ಮೇಳ-ಕಾರ್ಯಾಗಾರ


ಮಂಗಳೂರು: ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮತ್ತು ಅರಣ್ಯ ಇಲಾಖೆಯ ವತಿಯಿಂದ ಮೇ 17 ಮತ್ತು 18ರಂದು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ರಾಜ್ಯಮಟ್ಟದ ಗೇರು ಮೇಳ ಮತ್ತು ಗೇರು ಕೃಷಿ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ, ಮೇ 17ರಂದು ಪೂರ್ವಾಹ್ನ 11 ಗಂಟೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಬಿ ಖಂಡ್ರೆ ಉದ್ಘಾಟನೆ ನೇರವೇರಿಸುವರು. ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಹಲವು ಮಂದಿ ಗಣ್ಯರು ಪಾಲ್ಗೊಳ್ಳುವರು. ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು ಎಂದರು.

ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಗೇರು ಉತ್ಪನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಉಚಿತ ಅವಕಾಶ ಕಲ್ಪಿಸಲಾಗಿದೆ. 70ಕ್ಕೂ ಅಧಿಕ ಮಳಿಗೆಗಳಿಗೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಮೇಳದಲ್ಲಿ ತಜ್ಞರಿಂದ ಗೋಡಂಬಿ ಕೃಷಿಯ ಬಗ್ಗೆ ತಾಂತ್ರಿಕ ಕಾರ್ಯಾಗಾರ ನಡೆಯಲಿದೆ. ಅಲ್ಲದೆ ಗೇರು ಬೆಳೆ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಅವರು ವಿವರ ನೀಡಿದರು.

ಅಲ್ಲದೆ ಗೇರು ಮತ್ತು ಪರಿಸರ ಜಾಗ್ರತಿ ಸ್ಪರ್ಧೆಗಳು ನಡೆಯಲಿವೆ. ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಗೇರು ಮೇಳದ ವಿಶೇಷ ಆಕರ್ಷಣೆಯಾಗಿ ಮೇ.17ರಂದು ಬೆಳಗ್ಗೆ ಕದ್ರಿ ಪಾರ್ಕ್ ನ ಜಿಂಕೆ ಉದ್ಯಾನವನದಲ್ಲಿ ಬೆಳಗ್ಗೆ 9 ಗಂಟೆಗೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. 

ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಸಂಜೆ 7 ಗಂಟೆಗೆ ದೇವದಾಸ್ ಕಾಪಿಕಾಡ್ ತಂಡದವರಿಂದ ತುಳು ನಾಟಕ ಪ್ರದರ್ಶನ ಗೊಳ್ಳಲಿದೆ ಹಾಗೂ ಇಂಚರ ಮೆಲೋಡೀಸ್ ತಂಡದಿಂದ ಮೇ೧೮ರಂದು 2 ಗಂಟೆಗೆ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. 

ಈ ಗೇರು ಮೇಳದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಮಮತಾ ಗಟ್ಟಿ ಮಾಹಿತಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article