ಮೇ.19 ರಂದು ಐ.ಸಿ.ಎಸ್.ಎಸ್.ಆರ್ ಪ್ರಾಯೋಜಿತ ರಾಷ್ಟ್ರೀಯ ಸಮ್ಮೇಳನ
ಮಂಗಳೂರು: ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ ನವದೆಹಲಿ ಪ್ರಾಯೋಜಿತ ರಾಷ್ಟ್ರೀಯ ಸಮ್ಮೇಳನವು ಮೇ 19ರಂದು ಮಂಗಳೂರು ನಗರದ ಬಲ್ಮಠದಲ್ಲಿರುವ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
‘ಬ್ಲೂ ಎಕಾನಮಿ: ಗವರ್ನನ್ಸ್, ಸೊಸೈಟಿ ಆಂಡ್ ಸಸ್ಟೈನಬಲ್ ಡೆವಲಪ್ಮೆಂಟ್ ಪಾತ್ವೇಸ್ ಟು ಇನ್ಕ್ಲೂಸಿವ್, ರೆಸಿಲಿಯಂಟ್ ಆಂಡ್ ಸಸ್ಟೈನಬಲ್ ಕೋಸ್ಟಲ್ ಫ್ಯೂಚರ್ಸ್’ ಎಂಬ ವಿಷಯದಡಿ ನಡೆಯಲಿರುವ ಈ ರಾಷ್ಟ್ರೀಯ ಸಮ್ಮೇಳನವನ್ನು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಅರ್ಥಶಾಸ್ತ್ರ ವಿಭಾಗವು ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗಗಳ ಸಹಯೋಗದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ವಹಿಸಲಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಛೇರಿ ಮಂಗಳೂರು ಇಲ್ಲಿನ ಜಂಟಿ ನಿರ್ದೇಶಕಿ ಪ್ರೊ. ಕೆ.ಆರ್. ಕವಿತಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಐಸಿಎಆರ್ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಮಂಗಳೂರು ಇದರ ಪ್ರಧಾನ ವಿಜ್ಞಾನಿ ಡಾ. ರಾಜೇಶ್ ಕೆ.ಎಂ. ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್ಮೆಂಟ್‌ನ ಸಹ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ಕೆ. ಹಾಗೂ ಕೇರಳದ ಕಣ್ಣೂರಿನ ನಹೆರ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಶರ್ಫ್ರಾಸ್ ನವಾಸ್ ಎಂ.ಎ. ಉಪಸ್ಥಿತರಿರಲಿದ್ದಾರೆ.
ಸಂಜೆಯ ಸಮಾರೋಪ ಸಮಾರಂಭದಲ್ಲಿ ಡಾ. ಜಯವಂತ ನಾಯಕ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಬೆಳಗ್ಗೆ 9.30ಕ್ಕೆ ಆರಂಭವಾಗಲಿರುವ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕರಾವಳಿ ಅಭಿವೃದ್ಧಿ, ಮೀನುಗಾರಿಕಾ ಸವಾಲುಗಳು, ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಮತ್ತು ಆಡಳಿತ ಕುರಿತ ಮಹತ್ವದ ವಿಚಾರಗಳನ್ನು ಚರ್ಚಿಸಲಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಪ್ರೊ. ಗೋಪಾಲಕೃಷ್ಣ ಕೆ. ಅವರ ಮಾರ್ಗದರ್ಶನದಲ್ಲಿ ಸಮ್ಮೇಳನ ನಡೆಯುತ್ತಿದ್ದು, ಸಂಯೋಜಕರಾಗಿ ಡಾ. ಮಂಜುಳ ಮಲ್ಯ ಎಂ. ಹಾಗೂ ಸಹ ಸಂಯೋಜಕರಾಗಿ ಡಾ. ಜಯಶ್ರೀ ಕೆ. ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.