ಮೊಬೈಲ್ ಹ್ಯಾಕ್ ಮಾಡಿ 6.91 ಲಕ್ಷ ರೂ. ವಂಚನೆ
ಮಂಗಳೂರು: ಮೊಬೈಲ್ ಹ್ಯಾಕ್ ಮಾಡಿ, ಆನ್‌ಲೈನ್ ಮೂಲಕ 6.91 ಲಕ್ಷ ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 54 ವರ್ಷದ ದೂರುದಾರರು ಮೇ ೪ರಂದು ಮೊಬೈಲ್ ಪರಿಶೀಲಿಸುತ್ತಿದ್ದ ವೇಳೆ ಹಣ ವರ್ಗಾವಣೆಯಾಗಿರುವ ಎಸ್ಸೆಮ್ಮೆಸ್ ಕಂಡು ಬಂದಿದೆ. ಈ ಬಗ್ಗೆ ಬ್ಯಾಂಕ್ ಆಪ್ ಪರಿಶೀಲಿಸಿದಾಗ ಹಣ ವರ್ಗಾವಣೆಯಾಗಿರುವುದು ದೃಢಪಟ್ಟಿದೆ. ಈ ಬಗ್ಗೆ ಸೈಬರ್ ಸಹಾಯವಾಣಿಗೆ ದೂರು ನೀಡಿದ್ದಾರೆ. ಬಳಿಕ ಕಾವೂರಿನ ಬ್ಯಾಂಕ್‌ಗೆ ತೆರಳಿ ಸ್ಟೇಟ್ ಮೆಂಟ್ ತೆಗೆಸಿ ನೋಡಿದಾಗ ಮೇ ೩ರಂದು ಹಂತ ಹಂತವಾಗಿ ಸುಮಾರು 3,76,620 ರೂ. ವರ್ಗಾವಣೆ ಆಗಿರುವುದು ಕಂಡು ಬಂದಿದೆ.
ಕೂಳೂರಿನ ಇನ್ನೊಂದು ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಮೇ ೩ರಂದೇ 3,14,914 ರೂ. ವಿವಿಧ ಖಾತೆಗೆಗಳಿಗೆ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ಒಟ್ಟು 6,91,534 ರೂ.ವನ್ನು ಯಾರೋ ವಂಚಕರು ಮೊಬೈಲ್ ಹ್ಯಾಕ್ ಮಾಡಿ, ಆನ್‌ಲೈನ್ ಮೂಲಕ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಹಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.