ತಂಬಾಕಿನ ಸಹವಾಸ ಹಿತವಲ್ಲ: ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ

ತಂಬಾಕಿನ ಸಹವಾಸ ಹಿತವಲ್ಲ: ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ


ಮಂಗಳೂರು: ತಂಬಾಕು, ಅದು ಯಾವುದೇ ರೂಪದಲ್ಲಿ ಇರಲಿ ಅವೆಲ್ಲವೂ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ; ಒಮ್ಮೆ ಅದನ್ನು ಸೇವಿಸಲು ಆರಂಭಿಸಿದರೆ ಅದು ನಮ್ಮನ್ನು, ನಮ್ಮ ಜೀವನವನ್ನು ಮುಕ್ತಾಯಗೊಳಿಸುವವರೆಗೂ ಕೊಂಡೊಯ್ಯುತ್ತದೆ. ಆದ್ದರಿಂದ ನಿಮ್ಮ ದೃಷ್ಟಿಯನ್ನು ಬದಲಾಯಿಸಿಕೊಂಡು ಯಾವುದೇ ಚಟಕ್ಕೆ ದಾಸರಾಗುವುದು ಬೇಡ ಎನಿಸಿ ದೃಢ ನಿರ್ಧಾರ ಮಾಡಿ ದೃಢ ಪ್ರಯತ್ನ ಮಾಡಿದರೆ ನಿಮ್ಮ ಜೀವನ ಖಂಡಿತಕ್ಕೂ ಸುಂದರವಾಗುತ್ತದೆ. ಆದ್ದರಿಂದ ತಂಬಾಕಿನ ಸಹವಾಸ ಬೇಡವೇ ಬೇಡ ಬಿಟ್ಟುಬಿಡಿ" ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹೇಳಿದರು.

ಅವರು  ಶನಿವಾರ ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ "ವಿಶ್ವ ತಂಬಾಕು ನಿವಾರಣಾ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.  

ವೆನ್‌ಲಾಕ್ ಅಧೀಕ್ಷಕ  ಡಾ. ಶಿವಪ್ರಕಾಶ್ ಮತನಾಡಿ, ವಿದ್ಯಾರ್ಥಿಗಳು ಕೆಲವೊಮ್ಮೆ ಪ್ರತಿ ಜಾಹೀರಾತನ್ನೂ ತೀವ್ರವಾಗಿ ವಿಶ್ಲೇಷಿಸಬೇಕಾಗುತ್ತದೆ. ಆಕರ್ಷಕವಾಗಿ ಪ್ರಸ್ತುತ ಪಡಿಸಿದ ಕೆಲವು ಜಾಹೀರಾತುಗಳು ತಂಬಾಕು-ಗುಟ್ಕಾಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ಪ್ರೇರೇಪಿಸುತ್ತದೆ. ನೀವು ಕುತೂಹಲಕ್ಕಾಗಿಯೋ ಅಥವಾ ಅಲ್ಲಿರುವ ನಟ-ನಟಿಯರ ಮೇಲಿನ ಆಕರ್ಷಣೆಗೋ ಒಮ್ಮೆ ಇವುಗಳನ್ನು ಬಳಸಲು ಮನಸ್ಸು ಮಾಡಿದರೆ ನಿಮ್ಮ ಜೀವನ ದುರಂತದಲ್ಲಿ ಮುಕ್ತಾಯವಾಗುತ್ತದೆ. ಆದ್ದರಿಂದ ಶಿಕ್ಷಕರಾಗುವ ನೀವು ನಿಮ್ಮ ವಿವೇಚನಾ ಶಕ್ತಿಯನ್ನು ಸದಾ ಕಾಲ ಜಾಗೃತವಾಗಿ ಇಟ್ಟುಕೊಳ್ಳಬೇಕು" ಎಂದು  ಹೇಳಿದರು. ಟಿ.ವಿ ಮತ್ತು ಇತರೆ ಮಾಧ್ಯಮಗಳಲ್ಲಿ ಬರುತ್ತಿರುವ ಹಲವಾರು ಜಾಹೀರಾತುಗಳನ್ನು ಉದಾಹರಣೆಯಾಗಿ ನೀಡಿ ಅವುಗಳ ಹಿಂದಿರುವ ದುರುದ್ದೇಶವನ್ನು ಸಭೆಗೆ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರತಿನಿಧಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ತಂಬಾಕು-ಗುಟ್ಕಾ ರೀತಿಯ ಮಾದಕ ವಸ್ತುಗಳನ್ನು ಸೇವಿಸುವುದರ ಸಂಬಂಧ ಇರುವ ಕಾನೂನಿನ ಅಂಶಗಳನ್ನು ವಿಸ್ತಾರವಾಗಿ ತಿಳಿಸಿದರು. ಈ ಸಂಬಂಧದ ಕಾನೂನು ಎಷ್ಟು ಕಠಿಣವಾಗಿವೆ ಮತ್ತು ಇದರಿಂದ ತಪ್ಪಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಇವುಗಳಿಂದ ದೂರವಿರುವುದು ಎಂದು ತಿಳಿಸಿದರು.

ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಹಾಗೂ ಪ್ರಭಾರ ಪ್ರಾಂಶುಪಾಲರಾಗಿರುವ ಓ.ಆರ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. 

ದಂತವೈದ್ಯೆ ಡಾ. ಆರತಿ ಕುಲಕಣಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.  

ಈ ಸಂದರ್ಭದಲ್ಲಿ ಈ ಹಿಂದೆ ತಂಬಾಕಿನ ಚಟಕ್ಕೆ ದಾಸರಾಗಿದ್ದು ಈಗ ಆ ಚಟದಿಂದ ಮುಕ್ತರಾಗಿರುವ ವ್ಯಕ್ತಿ ಪ್ರನ್ನ ಕುಮಾರ್ ಎನ್ನುವವರು ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.

ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ. ಕಚೇರಿಯ ಪಿ.ಎಸ್.ಐ. ನಿಧಿ ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಎನ್ಫೋರ‍್ಮೆಂಟ್ ಅಧಿಕಾರಿಯಾಗಿರುವ ಡಾ.ದೀಪಾ ಪ್ರಭು ಕೆ.ಪಿ. ಸ್ವಾಗತಿಸಿ,  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ವಂದಿಸಿ, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಆಶುರಾ ಬೇಗಂ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article