ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಆರು ತಿಂಗಳಲ್ಲಿ ಭೂಸ್ವಾಧೀನ ಆರಂಭಿಸುವ ಸ್ಪಷ್ಟ ಭರವಸೆ: ಜೋಕಟ್ಟೆ ನಾಗರಿಕರ ಆಹೋರಾತ್ರಿ ಧರಣಿ ಮುಕ್ತಾಯ

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಆರು ತಿಂಗಳಲ್ಲಿ ಭೂಸ್ವಾಧೀನ ಆರಂಭಿಸುವ ಸ್ಪಷ್ಟ ಭರವಸೆ: ಜೋಕಟ್ಟೆ ನಾಗರಿಕರ ಆಹೋರಾತ್ರಿ ಧರಣಿ ಮುಕ್ತಾಯ


ಮಂಗಳೂರು: ಎಮ್.ಆರ್.ಪಿ.ಎಲ್.ನ ಉದ್ದೇಶಿತ ಹಸಿರು ವಲಯಕ್ಕಾಗಿ ಗುರುತಿಸಿರುವ 27 ಎಕರೆ ಜಮೀನು ಸ್ವಾಧೀನ ತಕ್ಷಣ ಆರಂಭಿಸಬೇಕು, ಪುನರ್ವಸತಿ ವಾಗ್ದಾನವನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮದ ಕೋಕ್ ಸಲ್ಪರ್ ಘಟಕದ ಮಾಲಿನ್ಯದಿಂದ ಸಂತ್ರಸ್ತರು "ನಾಗರಿಕ ಹೋರಾಟ ಸಮಿತಿ" ನೇತೃತ್ವದಲ್ಲಿ ಕಳೆದ ಎಂಟು ದಿವಸಗಳಿಂದ ನಡೆಸುತ್ತಿದ್ದ ಹಗಲು ರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮುಕ್ತಾಯಗೊಳಿಸಿದರು.


ಹಸಿರು ವಲಯಕ್ಕೆ ಗುರುತು ಮಾಡಲಾದ 27 ಎಕರೆ ಜಮೀನನ್ನು ಕಂಪೆನಿ ನೇರ ಖರೀದಿಸುವುದು, ಜಿಲ್ಲಾಧಿಕಾರಿ ಅಧೀನದ ಸಮಿತಿಯಿಂದ ಭೂಸ್ವಾಧೀನಗೊಳಿಸುವುದು, ಕೆಐಡಿಬಿ ಯಿಂದ ಸ್ವಾಧೀನ ಮಾಡುವುದು ಈ ಮೂರು ಮಾದರಿಗಳ ಸಾಧಕ ಬಾಧಕಗಳನ್ನು ಜಿಲ್ಲಾಧಿಕಾರಿಗಳು ಸಭೆಯ ಮುಂದೆ ವಿವರವಾಗಿ ತೆರದಿಟ್ಟರು. ಈ ಅಂಶಗಳ ಮೇಲೆ ಹೋರಾಟ ಸಮಿತಿಯ ಪ್ರತಿನಿಧಿಗಳು, ಜನಪ್ರತಿನಿಧಿಗಳು ಚರ್ಚಿಸಿದರು. ಕೆಐಎಡಿಬಿಯಿಂದ ಭೂಸ್ವಾಧೀನದ ಕಾನೂನು ಪ್ರಕ್ರಿಯೆಯಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ, ಭೂಸ್ವಾಧೀ‌ನ ಪ್ರಕ್ರಿಯೆ ಆರಂಭಿಸುವುದಾಗಿ ಜಿಲ್ಲಾಡಳಿತ ಸ್ಪಷ್ಟ ಭರವಸೆ ನೀಡಿದ ಹಿನ್ನಲೆಯಲ್ಲಿ ಹೋರಾಟ ಸಮಿತಿ ಪ್ರತಿನಿಧಿಗಳು ಕೆಐಎಡಿಬಿ ಮೂಲಕ ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದರು. ಭೂಸ್ವಾಧೀನ ಆರಂಭಿಸುವುದು ಯಾವುದೇ ಕಾರಣಕ್ಕು ಆರು ತಿಂಗಳು ಮೀರಬಾರದು ಎಂದು ಖಾತರಿ ಪಡಿಸಬೇಕು ಎಂದು ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು. ಜಿಲ್ಲಾಡಳಿತ, ಕೆಐಎಡಿಬಿ ಅಧಿಕಾರಿಗಳು ಅದಕ್ಕೆ ಒಪ್ಪಿಗೆ ಸೂಚಿಸಿದರು.‌


ನೇರ ಖರೀದಿಯ ಕಾರಣಕ್ಕೆ ಏಕಗಂಟಿನ ಪರಿಹಾರಕ್ಕೆ ಸಂತ್ರಸ್ತರು ಒಪ್ಪಿಗೆ ಸೂಚಿಸಿದ್ದು, ಈಗ ಭೂಸ್ವಾಧೀನ ಪ್ರಕ್ರಿಯೆ ತಡ ಆಗುತ್ತಿರುವುದು, ಕೆಐಎಡಿಬಿ ಮೂಲಕ ಈಗ ಸ್ವಾಧೀನ ನಡೆಯುತ್ತಿರುವುದರಿಂದ ಎಮ್ಆರ್ ಪಿಎಲ್ ನ ನಾಲ್ಕನೆ ಹಂತದ ಭೂಸ್ವಾಧೀನಕ್ಕೆ ಪೆರ್ಮುದೆ ಗ್ರಾಮಸ್ಥರಿಗೆ ಸಿಗುವ ಪುನರ್ವಸತಿ ಪ್ಯಾಕೇಜ್ ನಲ್ಲಿರುವ ಎಲ್ಲಾ ಅಂಶಗಳನ್ನು ಜೋಕಟ್ಟೆ ಸಂತ್ರಸ್ತರಿಗೂ ಒದಗಿಸಬೇಕು ಎಂದು ಆಗ್ರಹಿಸಿದರು. ಹಾಗೆಯೆ, ನಾಲ್ಕನೆ ಹಂತದ ಭೂಸ್ವಾಧೀನ ಪ್ಯಾಕೇಜ್ ನಲ್ಲಿ ಇರುವ 18 ತಿಂಗಳ ಮನೆ ಬಾಡಿಗೆಯನ್ನು ಜೋಕಟ್ಟೆಯವರಿಗೆ ಒದಗಿಸಬೇಕು, ಕುಸಿಯವ ಹಂತದಲ್ಲಿ ಇರುವ ಮನೆಗಳ ನಿವಾಸಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು. 


ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಸಂಸದ ಬೃಜೇಶ್ ಚೌಟ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಎಮ್.ಆರ್.ಪಿ.ಎಲ್. ಎಂ.ಡಿ. ಕಾಮತ್ ಸಹಿತ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು, ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಸಹಿತ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಧರಣಿ ಮುಕ್ತಾಯ:

ಜಿಲ್ಲಾಡಳಿತದ ಸಭೆಯ ಬಳಿಕ ಧರಣಿ ಮಂಟಪದಲ್ಲಿ ಹೋರಾಟ ಸಮಿತಿಯ ಸಾಮೂಹಿಕ ಸಭೆ ನಡೆಯಿತು. ಜಿಲ್ಲಾಡಳಿತದ ಸಭೆಯ ತೀರ್ಮಾನಗಳ ಪರಾಮರ್ಶೆ ನಡೆಯಿತು. ಎಲ್ಲರ ಅಭಿಪ್ರಾಯ ಪಡೆದು ಎಂಟು ದಿನಗಳಿಂದ ನಡೆಯುತ್ತಿರುವ ಹಗಲು ರಾತ್ರಿ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು. ಸಭೆಯ ತೀರ್ಮಾನದಂತೆ ಭೂಸ್ವಾಧೀನ ಪ್ರಕ್ರಿಯೆ ನಿಗದಿತ ಹಂತದಲ್ಲಿ ನಡೆಯದೆ,ನಿಧಾನಗೊಂಡಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗತಿಯಲ್ಲಿ ಆರಂಭಿಸುವುದು ಎಂಬ ತೀರ್ಮಾನದೊಂದಿಗೆ ಧರಣಿ ಮುಕ್ತಾಯಗೊಂಡಿತು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article