ಶಿರ್ತಾಡಿ: ಹೈಸ್ಕೂಲ್ ಸಹಪಾಠಿಗಳ "ಕುಟುಂಬ ಸಮ್ಮಿಲನ": ನಿವೃತ್ತ ಶಿಕ್ಷಕರಿಗೆ 'ಗುರುವಂದನಾ ಕಾರ್ಯಕ್ರಮ'
ಶಿರ್ತಾಡಿಯ ಇತಿಹಾಸದಲ್ಲಿ ಮೊದಲಬಾರಿಗೆ ನಡೆದ ಈ ಕಾರ್ಯಕ್ರಮವು ಒಂದು ಅಭೂತಪೂರ್ವ, ಅವಿಸ್ಮರಣೀಯ ಕಾರ್ಯಕ್ರಮವಾಗಿ ಯಶಸ್ವಿಯಾಗಿ ನಡೆಯಿತು.
ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಎಸ್.ಡಿ.ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಎಲ್ಲ ನಿವೃತ್ತ ಶಿಕ್ಷಕರು ಉದ್ಘಾಟಿಸಿದರು.
ನಿವೃತ್ತ ಕಚೇರಿ ಸಹಾಯಕ ಲೂವಿಸ್ ಸಲ್ದಾನ್ಹ, ಜವಾನ ಸುಬ್ಬ, ಪ್ರಸ್ತುತ ಕಚೇರಿ ಸಹಾಯಕ ವಿನಾಯಕ ಕಾಮತ್, ಜವಾನ ಮುಹಮ್ಮದ್ ಅವರನ್ನು ಸನ್ಮಾನಿಸಲಾಯಿತು.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು, ಸಹಪಾಠಿಗಳ ಸಾಧಕ ಮಕ್ಕಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಗೆ ಅಗತ್ಯವಿದ್ದ ನೋಟೀಸ್ ಬೋರ್ಡನ್ನು ಹಸ್ತಾಂತರಿಸಲಾಯಿತು.
ಹಿಂದೆಲ್ಲಾ ರುಚಿಕರವಾದ ತಿಂಡಿ ನೀಡುತ್ತಿದ್ದ ಮಕ್ಕಿ ಹೋಟೆಲ್ ನ ಜಗದೀಶ್ ಭಟ್, ಗೂಡಂಗಡಿ ಹೊಂದಿದ್ದ ರಾಜು ಶೆಟ್ಟಿ ಅವರ ಪತ್ನಿ ಗುಲಾಬಿ ಅಕ್ಕ ಮತ್ತು ಮಕ್ಕಿಯ ನದಿಯಲ್ಲಿ ದೋಣಿಯ ಮೂಲಕ ವಿದ್ಯಾರ್ಥಿಗಳನ್ನು ನದಿ ದಾಟಿಸುತ್ತಿದ್ದ ಜಕ್ರಿಬ್ಯಾರಿ ಅವರ ಪುತ್ರ ಆಲಿ ಜಕ್ರಿಯಾ ಅವರನ್ನು ಸನ್ಮಾನಿಸಲಾಯಿತು.
ಶಾಲಾಡಳಿತ ಮಂಡಳಿಯ ಕೋಶಾಧಿಕಾರಿ ಡಾ. ಆಶೀರ್ವಾದ್, ಸದಸ್ಯರಾದ ಸುರೇಶ್ ಅಂಚನ್, ಸುಧಾಕರ್,ನಿವೃತ್ತ ಮುಖ್ಯೋಪಾಧ್ಯಾಯರಾದ ಜಯರಾಮ್ ಹಾಗೂ ಪ್ರಸ್ತುತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಾವಿತ್ರಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಭಾಷಿಣಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸುರೇಖಾ ಕಾಶಿಪಟ್ಣ ಅವರು ಸ್ವಾಗತಿಸಿ ದಿನೇಶ್ ಪೂಜಾರಿ ವಾಲ್ಪಾಡಿ ವಂದಿಸಿದರು. ಪ್ರಶಾಂತ್ ಕೆ. ಅವರು ಶಿಕ್ಷಕರ ಪರಿಚಯ ಮಾಡಿದರು. ನವೀನ್ ಬಂಗೇರ ಸನ್ಮಾನ ಪತ್ರ ವಾಚಿಸಿದರು.ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಮಮತಾ, ಬಿಂದು, ಸೂರಜ್, ಸುರೇಂದ್ರ, ಸತೀಶ್, ಪ್ರೀತಮ್, ಜನಾರ್ದನ, ಪ್ರಥ್ವೀರ ಆರಿಗ,ಪ್ರಿಯಾ, ಅನುಷಾ,ಮತ್ತಿತರರು ಸಹಕರಿಸಿದರು.
ಸಭಾ ಕಾರ್ಯಕ್ರಮ ಬಳಿಕ ಶರಣ್ ಕೈಕಂಬ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಸಹಪಾಠಿಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
