ಮಾನವೀಯ ಗುಣಗಳಿಂದಾಗಿ ಸೌಹಾರ್ದ ಭಾರತದ ನಿರ್ಮಾಣ ಸಾಧ್ಯ: ರೋಯ್ ಕ್ಯಾಸ್ಟಲಿನೋ

ಮಾನವೀಯ ಗುಣಗಳಿಂದಾಗಿ ಸೌಹಾರ್ದ ಭಾರತದ ನಿರ್ಮಾಣ ಸಾಧ್ಯ: ರೋಯ್ ಕ್ಯಾಸ್ಟಲಿನೋ


ಮಂಗಳೂರು: ಜಾತ್ಯಾತೀತ ತತ್ವಗಳ ಅಡಿಪಾಯದಿಂದ ಭವ್ಯ ಭಾರತದ ನಿರ್ಮಾಣವಾಗಿದ್ದರೂ ಇಂದು ಅದೇ ತತ್ವಗಳಿಗೆ ಕೊಡಲಿಪೆಟ್ಟು ನೀಡುವ ಶಕ್ತಿಗಳು ಮೆರೆಯುತ್ತಿದ್ದು,ದೇಶದ ಸಂವಿಧಾನದ ಆಶಯಗಳನ್ನು ಬುಡಮೇಲುಗೊಳಿಸುವಂತಹ ದುಷ್ಕ್ರತ್ಯಗಳು ನಡೆಯುತ್ತಿದೆ.ಮತ್ತೆ ಸೌಹಾರ್ದ ಭಾರತದ ನಿರ್ಮಾಣವಾಗಬೇಕಾದರೆ ಎಳೆಯ ಪ್ರಾಯದ ಮಕ್ಕಳಲ್ಲೇ ಮಾನವೀಯ ಗುಣಗಳನ್ನು ಬೆಳೆಸುವ ಮೂಲಕ ಸೌಹಾರ್ದತೆಯನ್ನು ಕಾಪಾಡಬೇಕಾಗಿದೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಹೇಳಿದರು.


ಅವರು ಕಳೆದ 6 ದಿನಗಳಿಂದ ನಗರದ ಸಂತ ಅಲೋಶಿಯಸ್ ಹೈಸ್ಕೂಲ್ ನಲ್ಲಿ ಜರುಗಿದ ಚಿಣ್ಣರ ಕಲರವ-2026 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.


ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಜಂಟಿ ಆಶ್ರಯದಲ್ಲಿ ಸಂತ ಅಲೋಶಿಯಸ್ ಹೈಸ್ಕೂಲ್ ನ ಸಹಕಾರದೊಂದಿಗೆ ಈ ಕಾರ್ಯಾಗಾರವು ನಡೆಯಿತು.


ಮುಖ್ಯ ಅತಿಥಿಯಾದ ಚಿಣ್ಣರ ಚಾವಡಿಯ ಜಿಲ್ಲಾ ಸಂಚಾಲಕರೂ, ಯುವ ವಕೀಲರಾದ ಮನೋಜ್ ವಾಮಂಜೂರು ಅವರು ಮಾತನಾಡಿ, ವಿವಿಧ ಸ್ವರೂಪದ ಭಿನ್ನತೆಗಳುಳ್ಳ ಮಕ್ಕಳೆಲ್ಲರೂ ಒಂದಾಗಿ ಆಟವಾಡಿದರೆ ಅಲ್ಲಿ ಮೂಡುವ ಏಕತೆ ದೇಶಕ್ಕೆ ನೀಡುವ ಐಕ್ಯ ಸಂದೇಶವಾಗಿದೆ. ಇಂದಿನ ಶಿಕ್ಷಣ ನೀತಿಯು ಕೇವಲ ಅಂಕಗಳನ್ನು ಕೇಂದ್ರೀಕರಿಸುತ್ತದೆಯೇ ಹೊರತು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಕೊರತೆಯು ಸಾಂಸ್ಕೃತಿಕ ರಂಗಕ್ಕೂ ಹಾಗೂ ಸಾಹಿತ್ಯ ಲೋಕಕ್ಕೂ ಅಗಾಧ ಪರಿಣಾಮವನ್ನು ಬೀರಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಗೌರವ ಸಲಹೆಗಾರರಾದ ಫ್ಲೇವಿ ಕ್ರಾಸ್ತಾ ಅತ್ತಾವರ, ಶಿಬಿರದ ಶಿಕ್ಷಕರಾದ ರಾಜ್ ಮುಖೇಶ್ ಸುಳ್ಯ ಅವರು ಮಾತನಾಡಿ, ಇಂತಹ ಶಿಬಿರಗಳು ಮಕ್ಕಳನ್ನು ಸಮಾಜಮುಖಿಯನ್ನಾಗಿಸುವಲ್ಲಿ ಇನ್ನಷ್ಟು ಪ್ರಖರವಾಗಿ ಮೂಡಿಬರಲಿ ಎಂದು ಆಶಯ ವ್ಯಕ್ತಪಡಿಸಿದರು. ಶಿಬಿರದ ಬಗ್ಗೆ ಶಿಬಿರಾರ್ಥಿಗಳು ಹಾಗೂ ಪೋಷಕರು ಮೆಚ್ಚುಗೆಯ ಮಾತುಗಳನ್ನಾಡಿದರು. 

ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಚಿಣ್ಣರ ಚಾವಡಿ ತಂಡದ ಸಂಚಾಲಕ ಸುನಿಲ್ ಕುಮಾರ್ ಬಜಾಲ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಚಿಣ್ಣರ ಚಾವಡಿ ತಂಡದ ನಿಕಟಪೂರ್ವ ಅಧ್ಯಕ್ಷೆ ಪೂರ್ವಿ ಶೆಟ್ಟಿಯವರು ಮಾತನಾಡಿ, ಚಿಣ್ಣರ ಕಲರವದಂತಹ ಶಿಬಿರಗಳು ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸಿಗೆ ತುಂಬಾ ಮುದ ನೀಡುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಚಿಣ್ಣರ ಚಾವಡಿ ತಂಡದ ಸಹಸಂಚಾಲಕ ಅಸುಂತ ಡಿಸೋಜ, ಶಿಬಿರದ ನಿರ್ದೇಶಕ ಪ್ರವೀಣ್ ವಿಸ್ಮಯ ಬಜಾಲ್, ಚಿಣ್ಣರ ಚಾವಡಿಯ ಕಾರ್ಯದರ್ಶಿ ಸಂಗಮೇಶ್ ಉಪಸ್ಥಿತರಿದ್ದರು. 

ಚಿಣ್ಣರ ಚಾವಡಿ ತಂಡದ ನೂತನ ಅಧ್ಯಕ್ಷ ಆಡ್ಲಿನ್ ಸಿಕ್ವೇರಾ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article